Home ದಾವಣಗೆರೆ 84 CCTV ಪರಿಶೀಲಿಸಿದರೂ ಸಿಗದ ಸುಳಿವು, ಕಾಲಿನಲ್ಲಿದ್ದ ಒಂದು ಸ್ಕ್ರೂನಿಂದ ಹತ್ಯೆ ಮಿಸ್ಟ್ರಿ ಬಯಲು: ಪೋಲಿಸರ ಚಾಣಾಕ್ಷತನಕ್ಕೆ ಸಲಾಂ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

84 CCTV ಪರಿಶೀಲಿಸಿದರೂ ಸಿಗದ ಸುಳಿವು, ಕಾಲಿನಲ್ಲಿದ್ದ ಒಂದು ಸ್ಕ್ರೂನಿಂದ ಹತ್ಯೆ ಮಿಸ್ಟ್ರಿ ಬಯಲು: ಪೋಲಿಸರ ಚಾಣಾಕ್ಷತನಕ್ಕೆ ಸಲಾಂ!

Share
ಹತ್ಯೆ
Share

ಆಕಿವೀಡು/ಆಂಧ್ರಪ್ರದೇಶ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಆಕಿವೀಡು ಸಮೀಪದ ಉಪ್ಪುಟೇರು ಪ್ರದೇಶದಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಹತ್ಯೆ ಪ್ರಕರಣವನ್ನು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ಗುರುತೇ ಸಿಗದಂತೆ ನದಿಗೆ ಎಸೆಯಲಾಗಿದ್ದ ಶವದ ಹಿನ್ನೆಲೆಯನ್ನು ವೈದ್ಯಕೀಯ ದಾಖಲೆಗಳ ಸಹಾಯದಿಂದ ಪತ್ತೆಹಚ್ಚಿ, ಆರೋಪಿ ಪತಿಯನ್ನು ಜೈಲಿಗೆ ಕಳುಹಿಸಿದ್ದಾರೆ.

84 ಸಿಸಿಟಿವಿ ದೃಶ್ಯಾವಳಿಗಳ ಜಾಲಾಟ:

ಮೃತಳ ಗುರುತು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ 6 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತನಿಖಾಧಿಕಾರಿಗಳು ಕಾಕಿನಾಡ, ರಾಜಮಂಡ್ರಿ, ಭೀಮವರಂ ಹಾಗೂ ಏಲೂರು ಸೇರಿದಂತೆ ವಿವಿಧ ಭಾಗಗಳ ಸುಮಾರು 84 ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸುದೀರ್ಘವಾಗಿ ಪರಿಶೀಲಿಸಿದ್ದರು. ಆದರೆ ಆರಂಭದಲ್ಲಿ ಯಾವುದೇ ಪ್ರಮುಖ ಸುಳಿವು ಲಭ್ಯವಾಗಿರಲಿಲ್ಲ.

ಮರಣೋತ್ತರ ಪರೀಕ್ಷೆಯಲ್ಲಿ ಸಿಕ್ಕ ಬಿಗ್ ಕ್ಲೂ!

ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಮರಣೋತ್ತರ (Post-Mortem) ಪರೀಕ್ಷೆಯ ವೇಳೆಯಲ್ಲಿ. ವೈದ್ಯರು ಪರೀಕ್ಷೆ ನಡೆಸುವಾಗ ಮೃತಳ ಎಡಗಾಲಿನ ಮೂಳೆಗೆ ಸರ್ಜಿಕಲ್ ಸ್ಟೀಲ್ ಪ್ಲೇಟ್ ಮತ್ತು ಸ್ಕ್ರೂ ಅಳವಡಿಸಿರುವುದು ಕಂಡುಬಂದಿದೆ. ಆ ಸ್ಕ್ರೂ ಮೇಲಿದ್ದ ‘ಸೀರಿಯಲ್ ನಂಬರ್’ ಆಧಾರದ ಮೇಲೆ ಪೊಲೀಸರು ತಾಂತ್ರಿಕ ತನಿಖೆ ಚುರುಕುಗೊಳಿಸಿದರು.

ಆಸ್ಪತ್ರೆಯ ದಾಖಲೆಯಿಂದ ಗುರುತು ಪತ್ತೆ:

ಸೀರಿಯಲ್ ನಂಬರ್ ಜಾಲಾಡಿದಾಗ, ಈ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಈ ಮಹಿಳೆಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಆಸ್ಪತ್ರೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು, ಮೃತರನ್ನು ಉಪ್ಪಾಡ ಪ್ರದೇಶದ ನಿವಾಸಿ ಎಂದು ಗುರುತಿಸಿದರು.

ಕೌಟುಂಬಿಕ ಕಲಹ: ಪತಿ ವಶಕ್ಕೆ

ಮಹಿಳೆಯ ಗುರುತು ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೃತರ ಪತಿ ನಾರಾಯಣರಾವ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ದಂಪತಿ ನಡುವೆ ನಿರಂತರವಾಗಿ ಕೌಟುಂಬಿಕ ಭಿನ್ನಾಭಿಪ್ರಾಯಗಳಿದ್ದವು ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ

Share

Leave a comment

Leave a Reply

Your email address will not be published. Required fields are marked *