ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜೈಲು ಸೆಲ್ನಲ್ಲಿ ಮೊಬೈಲ್ ಫೋನ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಸತ್ಯಗಳು ಬಯಲಾಗಿವೆ.
ಕಳೆದ ಆಗಸ್ಟ್ 11ರಂದು ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ನಡೆಸಿದ ದಿಢೀರ್ ದಾಳಿಯ ವೇಳೆ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಸ್ಮಾರ್ಟ್ಫೋನ್, ಚಾರ್ಜರ್, ಪೆನ್ಡ್ರೈವ್ ಹಾಗೂ ನೋಟ್ಬುಕ್ ವಶಪಡಿಸಿಕೊಳ್ಳಲಾಗಿತ್ತು. ಜಪ್ತಿ ಮಾಡಲಾದ ಸಾಧನಗಳನ್ನು ತಾಂತ್ರಿಕ ತಪಾಸಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ವಿಧಿವಿಜ್ಞಾನ ವರದಿಯ ಪ್ರಕಾರ, ಜಪ್ತಿಯಾದ ಮೊಬೈಲ್ನಲ್ಲಿ ಹಲವಾರು ಅಶ್ಲೀಲ ವಿಡಿಯೋಗಳು ಮತ್ತು ಪೆನ್ಡ್ರೈವ್ನಲ್ಲಿ ವೆಬ್ ಸರಣಿಗಳು ಪತ್ತೆಯಾಗಿವೆ. ಅಲ್ಲದೆ, ಈ ಮೊಬೈಲ್ ಸಾಧನದಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್ ಹಾಗೂ ನೆಟ್ಫ್ಲಿಕ್ಸ್ನಂತಹ ಆ್ಯಪ್ಗಳು ಸಕ್ರಿಯವಾಗಿದ್ದು, ಪ್ರಜ್ವಲ್ ರೇವಣ್ಣ ಅವರು ತಮ್ಮ ಕುಟುಂಬಸ್ಥರು ಮತ್ತು ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಆದೇಶದಂತೆ ಪೊಲೀಸರು ಪ್ರಜ್ವಲ್ ರೇವಣ್ಣ ಮತ್ತು ಸಹ-ಕೈದಿ ಪ್ರತಾಪ್ ರಾಯ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಕ್ರಮವಾಗಿ ಮೊಬೈಲ್ ಮತ್ತು ಸಿಮ್ ಕಾರ್ಡ್ ಪೂರೈಸಲು ಸಹಕರಿಸಿದ ಜೈಲು ಸಿಬ್ಬಂದಿ ಹಾಗೂ ಇತರೆ ವ್ಯಕ್ತಿಗಳ ವಿರುದ್ಧವೂ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಲಾಗಿದೆ.





Leave a comment