ಮುಂಬೈ (ಸೆಪ್ಟೆಂಬರ್ 12, 2026): ಬಾಲಿವುಡ್ ನಟಿ ಆಮೀಷಾ ಪಟೇಲ್ ಅವರ ಹೆತ್ತವರ ಮುಂಬೈನ ಚರ್ಚ್‌ಗೇಟ್‌ನಲ್ಲಿರುವ ನಿವಾಸದಲ್ಲಿ ಭಾರಿ ಕಳವು ನಡೆದಿದ್ದು, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಜ್ರ ಖಚಿತ ಚಿನ್ನದ ಬಳೆ ಕಳುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರೀನ್ ಡ್ರೈವ್ ಪೊಲೀಸರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಾಲ್ಘರ್ ಮೂಲದ 40 ವರ್ಷದ ಸೀಮಾ ವಿನೋದ್ ಘಾಟೆ ಎಂದು ಗುರುತಿಸಲಾಗಿದೆ. ಈಕೆ ಅಮೀಷಾ ಪಟೇಲ್ ಅವರ ತಾಯಿ ಆಶಾ ಪಟೇಲ್ ಅವರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದಳು.
ಪ್ರಕರಣದ ಹಿನ್ನೆಲೆ:
ಪೋಲಿಸರ ಮಾಹಿತಿಯಂತೆ, ಈ ಆಭರಣ ಕಳವು ಪ್ರಕರಣ ಜನವರಿ 2026ರಲ್ಲೇ ನಡೆದಿತ್ತು. ಮನೆಯಲ್ಲಿ ಕಳುವಾದ ಬಳೆಯ ಬಗ್ಗೆ ಆಶಾ ಪಟೇಲ್ ಅವರಿಗೆ ಕೆಲಸದ ಮಹಿಳೆ ಸೀಮಾ ಮೇಲೆ ಅನುಮಾನವಿತ್ತು. ಕಳೆದ 5-6 ತಿಂಗಳುಗಳಿಂದ ಆಕೆಯನ್ನು ಒಪ್ಪಿಕೊಂಡು ಆಭರಣ ಹಿಂತಿರುಗಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಆಕೆ ತಪ್ಪನ್ನು ಒಪ್ಪಿಕೊಳ್ಳದಿದ್ದಾಗ, ಆಶಾ ಪಟೇಲ್ ಅವರು ಮರೀನ್ ಡ್ರೈವ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸ್ ಅಪರಾಧ ಪತ್ತೆ ದಳದ ತಂಡ ಕಾರ್ಯಪ್ರವೃತ್ತರಾಗಿ ಆರೋಪಿ ಸೀಮಾಳನ್ನು ವಿರಾರ್‌ನಲ್ಲಿ ಬಂಧಿಸಿದ್ದಾರೆ. ಪ್ರಸ್ತುತ ನ್ಯಾಯಾಲಯವು ಆರೋಪಿಯನ್ನು ಸೆಪ್ಟೆಂಬರ್ 15ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಕಳುವಾದ ಚಿನ್ನದ ಬಳೆಯನ್ನು ವಶಪಡಿಸಿಕೊಳ್ಳಲು ಮತ್ತು ಆರೋಪಿಯ ಹಳೆಯ ಅಪರಾಧ ಹಿನ್ನೆಲೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





Leave a comment