ದಾವಣಗೆರೆ/ನವದೆಹಲಿ: ಪ್ರಧಾನಮಂತ್ರಿ ಸೂರ್ಯ ಘರ್, ಮುಫ್ತ್ ಬಿಜ್ಲಿ ಯೋಜನೆಯಡಿ (PM-SGMBY) ದೇಶಾದ್ಯಂತ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾಪನೆಗಳ ಪ್ರಗತಿಯ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಲಿಖಿತ ಉತ್ತರ ನೀಡಿದೆ.
ಸರ್ಕಾರ ನೀಡಿದ ಮಾಹಿತಿಯಂತೆ, ಜುಲೈ 27, 2026ರವರೆಗೆ ದೇಶದಾದ್ಯಂತ 40,45,298 ರೂಫ್‌ಟಾಪ್ ಸೌರ ವ್ಯವಸ್ಥೆಗಳು ಸ್ಥಾಪನೆಗೊಂಡಿದ್ದು, 48,80,796 ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿವೆ. ಇದುವರೆಗೆ ₹27,343.9 ಕೋಟಿ ಕೇಂದ್ರ ಹಣಕಾಸು ಸಹಾಯಧನ (CFA) ಬಿಡುಗಡೆಯಾಗಿದೆ.
ಕರ್ನಾಟಕದ ಸಾಧನೆ
ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 22,952 ರೂಫ್‌ಟಾಪ್ ಸೌರ ವ್ಯವಸ್ಥೆಗಳು ಸ್ಥಾಪನೆಗೊಂಡಿದ್ದು, 35,450 ಕುಟುಂಬಗಳು ಇದರಿಂದ ಲಾಭ ಪಡೆದಿವೆ. ರಾಜ್ಯಕ್ಕೆ ₹163.44 ಕೋಟಿ ಸಹಾಯಧನ ಬಿಡುಗಡೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಯೋಜನೆ ವೇಗಗೊಳಿಸಲು ಕ್ರಮಗಳು
ಮನೆಮಟ್ಟದ ಸೌರ ವಿದ್ಯುತ್ ಅಳವಡಿಕೆಯನ್ನು ಚುರುಕುಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಪೋರ್ಟಲ್ www.pmsuryaghar.gov.in ಮೂಲಕ ಅರ್ಜಿ ಸಲ್ಲಿಕೆಯಿಂದ ಸಹಾಯಧನ ಜಮೆಯಾಗುವವರೆಗೆ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಶೇ 5.75ರ ವಾರ್ಷಿಕ ಬಡ್ಡಿದರದಲ್ಲಿ 10 ವರ್ಷಗಳವರೆಗೆ ಮೇಲಾಧಾರ
ರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
10 ಕಿಲೋವ್ಯಾಟ್‌ವರೆಗಿನ ಸ್ಥಾಪನೆಗಳಿಗೆ ತಾಂತ್ರಿಕ ಕಾರ್ಯಸಾಧ್ಯತೆ ಅನುಮೋದನೆ ವಿನಾಯಿತಿ, ಸ್ವಯಂಚಾಲಿತ ಲೋಡ್ ಹೆಚ್ಚಳ, ಅರ್ಜಿ ಪ್ರಕ್ರಿಯೆಯಲ್ಲೇ ನೆಟ್ ಮೀಟರಿಂಗ್ ಒಪ್ಪಂದ ಸೇರ್ಪಡೆ ಹಾಗೂ ಮಾರಾಟಗಾರರ ನೋಂದಣಿ ಪ್ರಕ್ರಿಯೆ ಸರಳೀಕರಣದಂತಹ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.
ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳ ಜೊತೆಗೆ, ಮುದ್ರಣ, ಟಿವಿ, ಎಫ್‌ಎಂ ಹಾಗೂ ಪ್ರಾದೇಶಿಕ ಮಾಧ್ಯಮಗಳ ಮೂಲಕ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರಗಳು ಮತ್ತು ವಿದ್ಯುತ್ ವಿತರಣಾ ಕಂಪನಿಗಳೊಂದಿಗೆ (ಡಿಸ್ಕಾಂ) ನಿಯಮಿತ ಪ್ರಗತಿ ಪರಿಶೀಲನೆ ಹಾಗೂ ಪ್ರಾದೇಶಿಕ ಸಭೆಗಳನ್ನು ನಡೆಸಲಾಗುತ್ತಿದೆ.
ಸಾರ್ವಜನಿಕರ ದೂರುಗಳ ನಿವಾರಣೆಗಾಗಿ 15555 ಸಹಾಯವಾಣಿ ಮೂಲಕ 12 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಸಚಿವಾಲಯ ಹಾಗೂ REC ಲಿಮಿಟೆಡ್‌ನ ರಾಷ್ಟ್ರೀಯ ಯೋಜನಾ ಅನುಷ್ಠಾನ ಸಂಸ್ಥೆ ಎಲ್ಲಾ ಡಿಸ್ಕಾಂಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸುತ್ತಿವೆ ಎಂದು ಸಚಿವಾಲಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಉತ್ತರಿಸಿದೆ.





Leave a comment