Home ದಾವಣಗೆರೆ “ಹಾಲು ಕುಡಿದ ತುಟಿ ಒಣಗಿಲ್ಲ, ನೆತ್ತಿ ಮೇಲಿನ ಮಾಂಸ ಒಣಗಿಲ್ಲ” ಎಂಬ ಹೇಳಿಕೆಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟೀಕರಣ ನೀಡಬೇಕು: ರೊಚ್ಚಿಗೆದ್ದ ಕೈ ಶಾಸಕ ದೇವೇಂದ್ರಪ್ಪ!
ದಾವಣಗೆರೆನವದೆಹಲಿಬೆಂಗಳೂರು

“ಹಾಲು ಕುಡಿದ ತುಟಿ ಒಣಗಿಲ್ಲ, ನೆತ್ತಿ ಮೇಲಿನ ಮಾಂಸ ಒಣಗಿಲ್ಲ” ಎಂಬ ಹೇಳಿಕೆಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟೀಕರಣ ನೀಡಬೇಕು: ರೊಚ್ಚಿಗೆದ್ದ ಕೈ ಶಾಸಕ ದೇವೇಂದ್ರಪ್ಪ!

Share
ಸಚಿವ
Share

ದಾವಣಗೆರೆ: ಹಾಲು ಕುಡಿದ ತುಟಿ ಒಣಗಿಲ್ಲ, ನೆತ್ತಿ ಮೇಲಿನ ಮಾಂಸ ಒಣಗಿಲ್ಲ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಹೇಳಿಕೆ ಮನಸ್ಸಿಗೆ ತುಂಬಾ ನೋವು ತಂದಿದೆ. ಈ ಮಾತುಗಳ ಬಗ್ಗೆ ನನಗೆ ಸ್ಪಷ್ಟೀಕರಣ ನೀಡಬೇಕು ಎಂದು ಜಗಳೂರು ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಆಗ್ರಹಿಸಿದ್ದಾರೆ. ಈ ಮೂಲಕ ಸ್ವಪಕ್ಷದ ಸಚಿವರ ವಿರುದ್ಧವೇ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ.

ಜಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ವ್ಯಕ್ತಿಗೆ ಸ್ಪರ್ಧೆ ಮಾಡಲು ಯಾವೆಲ್ಲಾ ಅರ್ಹತೆ ಇರಬೇಕೆಂಬ ಬಗ್ಗೆ ಮಾನದಂಡ ನೀಡುತ್ತದೆ. ಭಾರತೀಯ ಪ್ರಜೆ ಆಗಿರಬೇಕು. ಇಷ್ಟು ವರ್ಷ ನೆಲೆಸಿರಬೇಕು. ಕಾನೂನು ರೀತಿಯ ಯಾವುದೇ ಅಪರಾಧಿಯಾಗಬಾರದು, ದಿವಾಳಿಯಾಗಬಾರದೆಂಬುದೂ ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಿರುತ್ತದೆ. ಮಾತ್ರವಲ್ಲ, ಎಲ್ಲವನ್ನೂ ಪರಿಶೀಲಿಸಿದ ಬಳಿಕವಷ್ಟೇ ಸ್ಪರ್ಧೆ ಮಾಡಲು ಅವಕಾಶ ಕೊಡುತ್ತದೆ. ಆದರೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆಯ್ಕೆಯಾದ ಜನಪ್ರತಿನಿಧಿ ಬಗ್ಗೆ ಇಂಥ ಹೇಳಿಕೆ ನೀಡಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ 874 ಮತಗಳ ಅಂತರದಲ್ಲಿ ಜಗಳೂರು ಕ್ಷೇತ್ರದಿಂದ ಗೆದ್ದಿದ್ದೇನೆ. 2024ರ ಲೋಕಸಭಾ ಚುನಾವಣೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಿದ್ದರು. 30 ವರ್ಷಗಳ ಕಾಲ ಹಿನ್ನಡೆ ಅನುಭವಿಸಿದ್ದ ಜಗಳೂರು ಕ್ಷೇತ್ರದಲ್ಲಿ 27 ಸಾವಿರ ಮತಗಳ ಅಂತರ ಕಾಂಗ್ರೆಸ್ ಪಡೆದಿತ್ತು. ಇದಕ್ಕೆ ನಾನು ಮತ್ತು ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದ ನನ್ನ ಮಗ ದುಡಿದೆವು. ಕಾಂಗ್ರೆಸ್ ನಲ್ಲಿ ಒಡೆದು ಹೋಗಿದ್ದ ಮನಸುಗಳನ್ನು ಒಂದುಗೂಡಿಸಿ ಮುನ್ನಡೆ ನೀಡಿದ್ದೆವು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಶ್ರಮಿಸಿದ ಕಾರಣಕ್ಕೆ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮುನ್ನಡೆ ತಂದಿದ್ದೇವೆ. ಆದರೂ ಜಗಳೂರು ಕ್ಷೇತ್ರಕ್ಕೆ ನೀವು ಮಲತಾಯಿ ಧೋರಣೆ ತೋರಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಬಲಪಡಿಸಬೇಕು. ಶಕ್ತಿಯಾಗಬೇಕೆಂಬ ಕಾರಣಕ್ಕೆ ಹಗಲುರಾತ್ರಿ ಕೆಲಸ ಮಾಡುತ್ತಿದ್ದೇವೆ. ಕಳೆದ ಲೋಕಸಭಾ ಚುನಾವಣೇ ವೇಳೆ ನನ್ನ ತುಟಿ ಒಣಗಿತ್ತಾ, ನನ್ನ ನೆತ್ತಿ ಒಣಗಿತ್ತಾ? ನಿಮ್ಮ ಕ್ಷೇತ್ರದಲ್ಲಿ ವಿಧಾನಸಭೆಯಲ್ಲಿ ಬಂದಿದ್ದ ಮುನ್ನಡೆ ಎಷ್ಟು? ಲೋಕಸಭಾ ಚುನಾವಣೆಯಲ್ಲಿ ಎಷ್ಟು ಹಿನ್ನೆಡೆ ಆಯ್ತು. ಸ್ವಾಮಿ ಮನೆಯಲ್ಲಿ ಉಸ್ತುವಾರಿ ಸಚಿವರು, ಸಂಸದರು, ಉಪಚುನಾವಣೆಯಲ್ಲಿ ಗೆದ್ದ ನಿಮ್ಮ ಸುಪುತ್ರರಿದ್ದಾರೆ. ನನಗೆ ನಿಮ್ಮ ತಾಯಿಗಿಂತ ಹೆಚ್ಚು ವಯಸ್ಸಾಗಿದೆ. ನಾನು ದಲಿತ ಎಂಬ ಕಾರಣಕ್ಕೆ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನು ಚುನಾವಣಾ ಆಯೋಗಕ್ಕೆ ಹೋಗಿ ಪ್ರಶ್ನೆ ಮಾಡಬೇಕು ಎನಿಸುತ್ತಿದೆ. ಯಾಕೆ ಮಾನನಷ್ಟ ಮೊಕದ್ದಮೆ ಹೂಡಬಾರದೆಂಬ ಆಲೋಚನೆಯೂ ಬರುತ್ತಿದೆ. ಚುನಾವಣಾ ಆಯೋಗಕ್ಕೆ ಅಗೌರವ ತೋರಿದ್ದೀರಿ. ಕಾಲ ಮಿಂಚಿಲ್ಲ. ನೀವು ಮತ್ತು ನಿಮ್ಮ ಕುಟುಂಬ ಎಂದರೆ ಪ್ರಾಣಕ್ಕಿಂತ ಹೆಚ್ಚು ನನಗೆ. ಪ್ರೀತಿಸಿದ್ದೇವೆ, ಗೌರವಿಸಿದ್ದೇವೆ. ಅದೂ ವೈಯಕ್ತಿಕವಾಗಿ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ರಾಜಿಯಾಗುವ ಪ್ರಶ್ನೆಯೇ ಉದ್ಭವಿಸದು ಎಂದು ಅಸಮಾಧಾನ ಹೊರಹಾಕಿದರು.

ಪ್ರಾಣಕ್ಕಿಂತ ನಮಗೆ ಮಾನ ಮುಖ್ಯ. ಸ್ವಾಭಿಮಾನಕ್ಕೆ ಚ್ಯುತಿ ಬಂದರೆ ಹೊಂದಾಣಿಕೆ ಮಾಡಿಕೊಳ್ಳಲು ಆಗಲ್ಲ. ನನಗೆ ಕ್ಷೇತ್ರದ ಜನರ ಬದುಕು ಮುಖ್ಯ. ಜಗಳೂರು ಕ್ಷೇತ್ರಕ್ಕೆ ಯಾಕೆ ಮಲತಾಯಿ ಧೋರಣೆ ತೋರುತ್ತೀರಿ. ಎಲ್ಲಾ ಶಕ್ತಿ ನಿಮಗಿದ್ದರೂ ಯಾಕೆ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಬಹಳ ನೊಂದು ಹೇಳುತ್ತಿದ್ದೇನೆ. ಅನ್ಯಾಯ ಆಗಿರುವುದನ್ನು ಸರಿಪಡಿಸಿಕೊಡಬೇಕು. ಮಾಡಲೇಬೇಕು ಎಂಬ ಒತ್ತಾಯ ಮಾಡುತ್ತೇನೆ ಎಂದು ದೇವೇಂದ್ರಪ್ಪ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.