ನವದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಹಾಗೂ ಸಾರ್ವಜನಿಕ ಸೇವೆಯ 25 ವರ್ಷಗಳು ಪೂರ್ಣಗೊಂಡ ಶುಭ ಸಂದರ್ಭದಲ್ಲಿ, ಅವರ ಶಾಲಾ ದಿನಗಳ ಕುರಿತು ಅವರ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿದ್ದ ಹೆಚ್. ಸಿ. ಪಟೇಲ್ ಅವರು ತಮ್ಮ ಸುಂದರ ನೆನಪುಗಳನ್ನು ಹಂಚಿಕೊಂಡಿದ್ದಾರೆ.
೧೯೬೫ ರಿಂದ ೧೯೬೭ರ ಅವಧಿಯಲ್ಲಿ ಗುಜರಾತ್ನ ವಡ್ನಗರದ ಬಿ.ಎನ್. ಹೈಸ್ಕೂಲ್ನಲ್ಲಿ ೧೦ ಮತ್ತು ೧೧ನೇ ತರಗತಿಯಲ್ಲಿ ಮೋದಿ ಅವರಿಗೆ ಪಾಠ ಮಾಡಿದ್ದ ಪಟೇಲ್, “ನರೇಂದ್ರ ಮೋದಿ ಬಾಲ್ಯದಲ್ಲೇ ಅತ್ಯಂತ ಚುರುಕಾದ ಮತ್ತು ವಿಷಯಗಳನ್ನು ತಕ್ಷಣವೇ ಗ್ರಹಿಸುವ ವಿದ್ಯಾರ್ಥಿಯಾಗಿದ್ದರು” ಎಂದು ಸ್ಮರಿಸಿದ್ದಾರೆ.
ಶಾಲಾ ದಿನಗಳ ವಿಶೇಷ ಘಟನೆಗಳು
ನಾಟಕ ಮತ್ತು ವಾಗ್ಮಿ: ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಮೋದಿ, ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತು ಅದ್ಭುತ ಭಾಷಣ ಮಾಡುತ್ತಿದ್ದರು. ಶಾಲೆಯ ಕಾಂಪೌಂಡ್ ಗೋಡೆ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಆಯೋಜಿಸಿದ್ದ ನಾಟಕದಲ್ಲಿ ‘ಜೋಗಿದಾಸ್ ಖುಮಾನ್’ ಎಂಬ ಜಾನಪದ ವೀರನ ಪಾತ್ರ ವಹಿಸಿ ೧೦,೦೦೦ ಜನರ ಎದುರು ಅಭಿನಯಿಸಿ ೧೦ ನಿಮಿಷಗಳ ಕಾಲ ನಿರಂತರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಆರ್ಎಸ್ಎಸ್ ಶಖೆ ಮತ್ತು ಭಾವೈಕ್ಯತೆ: ಶಾಲಾ ಚಟುವಟಿಕೆಗಳ ಹೊರತಾಗಿ ಅವರು ಆರ್ಎಸ್ಎಸ್ (RSS) ಶಖೆಗೆ ನಿಯಮಿತವಾಗಿ ತೆರಳುತ್ತಿದ್ದರು. ತಮ್ಮ ಮುಸ್ಲಿಂ ಸಹಪಾಠಿಯನ್ನು ಮನೆಗೆ ಕರೆತಂದು ಒಟ್ಟಿಗೆ ಊಟ ಮಾಡುತ್ತಿದ್ದ ಮೋದಿ, ಬಾಲ್ಯದಿಂದಲೇ ಎಲ್ಲಾ ಧರ್ಮಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು.
ಧೈರ್ಯಶಾಲಿ ಮತ್ತು ಸಾಹಸಿ: ಶರ್ಮಿಷ್ಠ ಕೆರೆಯಿಂದ ಒಮ್ಮೆ ಮೊಸಳೆ ಮರಿಯನ್ನು ಮನೆಗೆ ತಂದಿದ್ದ ಘಟನೆಯನ್ನು ಶಿಕ್ಷಕರು ನೆನಪಿಸಿಕೊಂಡರು. ಬಳಿಕ ಅವರ ತಾಯಿ ಹೀರಾಬೆನ್ ಅವರ ಮಾತಿಗೆ ಗೌರವ ನೀಡಿ ಅದನ್ನು ಮರಳಿ ಕೆರೆಗೆ ಬಿಟ್ಟಿದ್ದರು. ಇದರ ಜೊತೆಗೆ, ತಂದೆಯ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಾ ರೈಲ್ವೆ ನಿಲ್ದಾಣದಲ್ಲಿ ದಿನಕ್ಕೆರಡು ಬಾರಿ ಚಹಾ ಮಾರಾಟ ಮಾಡುತ್ತಿದ್ದರು.
ಗುರು ಗೌರವ:
೨೦೦೧ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ಜನಸಂದಣಿಯ ನಡುವೆಯೂ ತಮ್ಮ ಶಿಕ್ಷಕರ ಧ್ವನಿ ಕೇಳಿ ಅವರ ಬಳಿ ಬಂದು ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದರು. ನಂತರ 2005ರಲ್ಲಿ ತಮಗೆ ಪಾಠ ಮಾಡಿದ 26 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಅಹಮದಾಬಾದ್ನ ಪಂಚತಾರಾ ಹೋಟೆಲ್ನಲ್ಲಿ ಸನ್ಮಾನಿಸಿ ಗೌರವಿಸಿದ್ದರು.





Leave a comment