ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ತಕ್ಷಣದ ಯಶಸ್ಸು ಮತ್ತು ಸೋಶಿಯಲ್ ಮೀಡಿಯಾ ರೀಲ್ಸ್‌ಗಳತ್ತ ಆಕರ್ಷಿತರಾಗುತ್ತಿರುವ ‘ಜೆನ್ ಜಿ’ (Gen Z) ಯುವಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಎಚ್ಚರಿಕೆ ಹಾಗೂ ಸಲಹೆ ನೀಡಿದ್ದಾರೆ.
“ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್‌ಗಳು ನಿಮ್ಮನ್ನು ವಿಭಿನ್ನ ದಾರಿಗಳಿಗೆ ಎಳೆಯುತ್ತಾರೆ. ಯಾವುದೇ ಕಾರಣಕ್ಕೂ ಶಾರ್ಟ್‌ಕಟ್ (ಸುಲಭ ದಾರಿ) ಹುಡುಕಬೇಡಿ. ಶಾರ್ಟ್‌ಕಟ್ ನಿಮ್ಮನ್ನೇ ನಾಶಪಡಿಸುತ್ತದೆ (A shortcut will cut you short)” ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಆತ್ಮಕಥೆ ‘ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್’ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿಯವರು ಮಾತನಾಡಿದರು. ರೈಲ್ವೆ ನಿಲ್ದಾಣಗಳಲ್ಲಿ ಹಾಕಲಾಗಿರುವ ‘ಶಾರ್ಟ್‌ಕಟ್ ಅಪಾಯಕಾರಿ’ ಎಂಬ ಸೂಚನಾ ಫಲಕಗಳನ್ನು ಉದಾಹರಿಸಿದ ಅವರು, ಸುರಕ್ಷಿತ ಮೇಲ್ಸೇತುವೆ ಬಳಸುವ ಬದಲು ಹಳಿ ದಾಟುವ ಜನರು ದೊಡ್ಡ ಆಪತ್ತಿಗೆ ಸಿಲುಕುವಂತೆ, ಜೀವನದಲ್ಲೂ ಶಾರ್ಟ್‌ಕಟ್ ಹುಡುಕುವುದು ಅಪಾಯಕಾರಿ ಎಂದು ತಿಳಿಸಿದರು.
ಯುವಕರು ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳ ಹಿಂದೆ ಬೀಳುವ ಬದಲು, ತಾವು ಗೌರವಿಸುವ ಮತ್ತು ಇಷ್ಟಪಡುವ ಸಾಧಕರ ಆತ್ಮಕಥೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಡಿಜಿಟಲ್ ಕನೆಕ್ಟ್ ಮತ್ತು ರಾಜಕೀಯ ಹಿನ್ನೆಲೆ:
ಪ್ರಧಾನಿ ಮೋದಿ ಅವರ ಈ ಪ್ರಮುಖ ಪ್ರಕಟಣೆಯು ಕೇಂದ್ರ ಸರ್ಕಾರದ ಸಕ್ರಿಯ ಯುವಜನ ಸಂಪರ್ಕ (Youth Outreach) ಅಭಿಯಾನದ ಭಾಗವಾಗಿದೆ. ಇತ್ತೀಚೆಗೆ ವೈರಲ್ ಆದ ‘GRWM’ (Get Ready With Me) ಹಾಗೂ ‘Hi, Friends’ ಶೈಲಿಯ ರೀಲ್ಸ್ ಮತ್ತು ಸೆಲ್ಫಿ ವಿಡಿಯೋಗಳ ಮೂಲಕ ಮೋದಿ ಯುವಜನತೆಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ನಡೆದ NEET-UG ಪರೀಕ್ಷೆ ಅಕ್ರಮಗಳ ಪ್ರತಿಭಟನೆಯ ನಂತರ, ವಿದ್ಯಾರ್ಥಿಗಳು ಹಾಗೂ ಯುವ ಸಮಾಜವನ್ನು ನೇರವಾಗಿ ತಲುಪಲು ಸರ್ಕಾರಿ ಇಲಾಖೆಗಳು ಹಾಗೂ ಬಿಜೆಪಿ ನಾಯಕರು ಇನ್ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್‌ಗಳಂತಹ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಿದ್ದಾರೆ.





Leave a comment