Home ಕ್ರೈಂ ನ್ಯೂಸ್ ಪಾಕಿಸ್ತಾನದ ಮತ್ತೊಂದು ‘ಡೂಪ್ಲಿಕೇಟ್’ ಡ್ರಾಮಾ: ಭಾರತ ಹತ್ಯೆಗೈದ ಲಷ್ಕರ್ ಉಗ್ರ ಮೊಹಮ್ಮದ್ ಆಸಿಫ್ ಜೀವಂತವಾಗಿದ್ದಾನೆಂದು ನಕಲಿ ವ್ಯಕ್ತಿಯ ಪ್ರದರ್ಶನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪಾಕಿಸ್ತಾನದ ಮತ್ತೊಂದು ‘ಡೂಪ್ಲಿಕೇಟ್’ ಡ್ರಾಮಾ: ಭಾರತ ಹತ್ಯೆಗೈದ ಲಷ್ಕರ್ ಉಗ್ರ ಮೊಹಮ್ಮದ್ ಆಸಿಫ್ ಜೀವಂತವಾಗಿದ್ದಾನೆಂದು ನಕಲಿ ವ್ಯಕ್ತಿಯ ಪ್ರದರ್ಶನ!

Share
ಪಾಕಿಸ್ತಾನ
Share

ನವದೆಹಲಿ / ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಯೂಸ್‌ಮಾರ್ಗ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಟಾಪ್ ಕಮಾಂಡರ್ ಹಾಗೂ ಪಾಕಿಸ್ತಾನದ ಮಾಜಿ SSG ಕಮಾಂಡೋ ಮೊಹಮ್ಮದ್ ಆಸಿಫ್ ಅಲಿಯಾಸ್ ಹಶೀಮ್ ಮೂಸಾನನ್ನು ಬುಧವಾರ ಹೊಡೆದುರುಳಿಸಿದ್ದವು. ಆದರೆ, ಭಾರತದ ಈ ಯಶಸ್ಸನ್ನು ನಿರಾಕರಿಸಲು ಹೊರಟ ಪಾಕಿಸ್ತಾನ, ಗುರುವಾರ ಮಾಧ್ಯಮಗಳ ಮುಂದೆ ನಕಲಿ ವ್ಯಕ್ತಿಯೊಬ್ಬನನ್ನು ತಂದು ನಿಲ್ಲಿಸಿ ನಗೆಪಾಟಲಿಗೀಡಾಗಿದೆ.

ಪಾಕಿಸ್ತಾನದ ‘ಡೂಪ್ಲಿಕೇಟ್’ ತಂತ್ರ ಬಯಲು

ಗುರುವಾರ ಪಾಕಿಸ್ತಾನ ಸೇನೆಯ ಐಎಸ್‌ಪಿಆರ್ (DG ISPR) ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಿಯೊಬ್ಬನನ್ನು ಹಾಜರುಪಡಿಸಲಾಯಿತು. ಆತ ತನ್ನನ್ನು ತಾವು ‘ಮೊಹಮ್ಮದ್ ಆಸಿಫ್’ ಎಂದು ಪರಿಚಯಿಸಿಕೊಂಡು, “ನಾನು 2000 ರಲ್ಲಿ ಪಾಕ್ ಸೇನೆ ಸೇರಿ 2005 ರಿಂದ 18 ವರ್ಷ SSG ಕಮಾಂಡೋ ಆಗಿ ಸೇವೆ ಸಲ್ಲಿಸಿ 2023 ರಲ್ಲಿ ಹವಿಲ್ದಾರ್ ಆಗಿ ನಿವೃತ್ತನಾಗಿದ್ದೇನೆ. ನಾನು ಜೀವಂತವಾಗಿದ್ದೇನೆ” ಎಂದು ಪ್ರತಿಪಾದಿಸಿದನು.

ಆದರೆ, ಸ್ವತಂತ್ರ OSINT (Open Source Intelligence) ವಿಶ್ಲೇಷಕರು ಮತ್ತು ಭಾರತೀಯ ರಕ್ಷಣಾ ತಜ್ಞರು ಈ ದೃಶ್ಯಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದಾಗ ಪಾಕಿಸ್ತಾನದ ನಕಲಿ ಪ್ರಚಾರ ಬಯಲಾಗಿದೆ.

ಮುಖದ ಲಕ್ಷಣಗಳಲ್ಲಿದೆ ವ್ಯತ್ಯಾಸ

ಭಾರತೀಯ ಪಡೆಗಳು ಹತ್ಯೆಗೈದ ಉಗ್ರ ಹಶೀಮ್ ಮೂಸಾನ ಹಳೆಯ ಫೋಟೋಗಳು ಹಾಗೂ ಪಾಕಿಸ್ತಾನ ಮಾಧ್ಯಮಗಳ ಮುಂದೆ ತಂದು ನಿಲ್ಲಿಸಿದ ವ್ಯಕ್ತಿಯ ಮುಖದ ಲಕ್ಷಣಗಳನ್ನು ಹೋಲಿಸಿ ನೋಡಿದಾಗ ಕಿವಿಗಳ ಆಕಾರ, ಮೂಗಿನ ವಿನ್ಯಾಸ ಮತ್ತು ಕಣ್ಣುಗಳ ಜೋಡಣೆಯಲ್ಲಿ ಸ್ಪಷ್ಟ ವ್ಯತ್ಯಾಸಗಳಿರುವುದು ಕಂಡುಬಂದಿದೆ. ಪಾಕಿಸ್ತಾನವು ಭಾರತದ ದಾಳಿಯ ಯಶಸ್ಸನ್ನು ಮರೆಮಾಚಲು ನಕಲಿ ವ್ಯಕ್ತಿಯನ್ನು (Duplicate) ಬಳಸಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ.

“ಪಾಕಿಸ್ತಾನವು ಸತ್ಯ ಬಯಲಾಗಿದೆ ಎಂದು ತಿಳಿದೂ ನಕಲಿ ವ್ಯಕ್ತಿಯನ್ನು ತಂದು ಹಶೀಮ್ ಮೂಸಾ ಎಂದು ಬಿಂಬಿಸಿದೆ. ಈ ವ್ಯಕ್ತಿ ಮತ್ತೆಂದೂ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಸುಳ್ಳು ಹೇಳುವ ಪಾಕಿಸ್ತಾನಕ್ಕೆ ಇದೇನು ಹೊಸದಲ್ಲ.”

— ಮೇಜರ್ ಜನರಲ್ ಹರ್ಷ ಕಾಕರ್ (ನಿವೃತ್ತ)

ಯಾರಾಗಿದ್ದ ಈ ಹಶೀಮ್ ಮೂಸಾ?

ಭಯೋತ್ಪಾದನಾ ಚಟುವಟಿಕೆ: 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಪೀರ್ ಪಂಜಾಲ್ ಹಾಗೂ ಕಣಿವೆ ಪ್ರದೇಶಗಳಲ್ಲಿ ನಡೆದ ಹಲವು ರಕ್ತಸಿಕ್ತ ದಾಳಿಗಳ ಹಿಂದಿನ ಪ್ರಮುಖ ರೂವಾರಿಯಾಗಿದ್ದ.

ಪಾಕ್ ಅಧ್ಯಕ್ಷರ ಭದ್ರತೆ: ಈತ 2006 ರಿಂದ 2008 ರ ಅವಧಿಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಭದ್ರತಾ ಸಿಬ್ಬಂದಿಯಾಗಿದ್ದ ಹಾಗೂ ಬಲೂಚಿಸ್ತಾನದಲ್ಲಿ ನಡೆದ ಕಾರ್ಯಾಚರಣೆಗಳಲ್ಲೂ ಭಾಗಿಯಾಗಿದ್ದ.

ನಾಲ್ವರ ಗುಂಪು ಅಂತ್ಯ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ಕು ಲಷ್ಕರ್ ಉಗ್ರರ ಪೈಕಿ ಮೂವರನ್ನು ಈಗಾಗಲೇ ಬೇರೆ ಬೇರೆ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಲಾಗಿತ್ತು. ಕೊನೆಯದಾಗಿ ಉಳಿದಿದ್ದ ಮೂಸಾನನ್ನು ಕೊಲ್ಲುವ ಮೂಲಕ ಈ ನಾಲ್ಕೂ ಉಗ್ರರ ಜಾಲವನ್ನು ಭಾರತೀಯ ಪಡೆಗಳು ಸಂಪೂರ್ಣವಾಗಿ ಧ್ವಂಸಗೊಳಿಸಿವೆ.

Share

Leave a comment

Leave a Reply

Your email address will not be published. Required fields are marked *