ಮುಂಬೈ: ಚಿತ್ರರಂಗದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ನಟಿ ದಿಯಾ ಮಿರ್ಜಾ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಕಲಾವಿದರ ಜವಾಬ್ದಾರಿಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಹವಾಮಾನ ವೈಪರೀತ್ಯದಂತಹ ಸಾರ್ವಜನಿಕ ವಿಷಯಗಳ ಕುರಿತು ಕಲಾವಿದರು ಧ್ವನಿ ಎತ್ತುವುದನ್ನು ಕೆಲವರು ಪ್ರಶ್ನಿಸುವುದಕ್ಕೆ ಪ್ರತಿಕ್ರಿಯಿಸಿದ ಅವರು, “ಕಲಾವಿದರು ಇಂತಹ ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ ಜನರು ಪ್ರಶ್ನೆ ಮಾಡುವುದು ನನಗೆ ಆಶ್ಚರ್ಯ ತರುತ್ತದೆ. ಸತ್ಯವನ್ನು ಬದುಕುವುದು ಮತ್ತು ಹಂಚಿಕೊಳ್ಳುವುದೇ ಒಬ್ಬ ಕಲಾವಿದನ ನಿಜವಾದ ಜವಾಬ್ದಾರಿ. ನಾವು ನಮ್ಮ ಸತ್ಯಗಳನ್ನು ಧ್ವನಿಸದಿದ್ದರೆ, ಬೇರೆ ಯಾರು ಹೇಳುತ್ತಾರೆ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಸಿನಿಮಾ ರಂಗದಲ್ಲಿ ಮಹಿಳೆಯರ ಚಿತ್ರಣ ಬದಲಾಗಿರುವುದನ್ನು ಮೆಚ್ಚಿದ ಅವರು, “ಹಿಂದೆ ಕೆಲವು ನಿರ್ದೇಶಕರು ಮಾತ್ರ ಮಹಿಳೆಯರಿಗೆ ಶಕ್ತಿಶಾಲಿ ಪಾತ್ರಗಳನ್ನು ನೀಡುತ್ತಿದ್ದರು. ಆದರೆ ಕಳೆದ ದಶಕದಲ್ಲಿ ವಾಣಿಜ್ಯ ಸಿನಿಮಾಗಳಲ್ಲೂ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಮಹತ್ವ ಮತ್ತು ಆಳ ಸಿಗುತ್ತಿರುವುದು ಸಂತಸದ ವಿಷಯ” ಎಂದಿದ್ದಾರೆ.
ತಮ್ಮ ಇತ್ತೀಚಿನ ‘ಇಕ್ಕಾ’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಮತ್ತು ಸನ್ನಿ ಡಿಯೋಲ್ ಅವರೊಂದಿಗೆ ನಟಿಸಿದ ವಿಶೇಷ ಅನುಭವವನ್ನು ಹಂಚಿಕೊಂಡ ದಿಯಾ, ‘ಆಪರೇಷನ್ ಸಫೇದ್ ಸಾಗರ್’ ಸೇರಿದಂತೆ ವೈವಿಧ್ಯಮಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ದಿಯಾ ಮಿರ್ಜಾ ಅಭಿನಯದ ‘ಆಪರೇಷನ್ ಸಫೇದ್ ಸಾಗರ್’ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.





Leave a comment