ನೋಯ್ಡಾ (ಉತ್ತರ ಪ್ರದೇಶ): ಗೌತಮ್ ಬುದ್ಧ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಆಡಳಿತಾತ್ಮಕ ವರ್ಗಾವಣೆಯಂತೆ, 30 ವರ್ಷದ ಐಪಿಎಸ್ ಅಧಿಕಾರಿ ಪ್ರೀತಿ ಯಾದವ್ ಅವರು ನೋಯ್ಡಾ ವಲಯ-1ರ ನೂತನ ಉಪ ಪೊಲೀಸ್ ಆಯುಕ್ತರಾಗಿ (DCP) ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಈ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ನೋಯ್ಡಾದ ಮೊದಲ ಮಹಿಳಾ ಡಿಸಿಪಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಹರಿಯಾಣದ ರೇವಾರಿ ಮೂಲದ ಪ್ರೀತಿ ಯಾದವ್ ಅವರು 2019 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಯುಪಿಎಸ್‌ಸಿ (UPSC) ಸಿವಿಲ್ ಸರ್ವೀಸ್ ಪರೀಕ್ಷೆ 2018ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 466ನೇ ಶ್ರೇಣಿಯನ್ನು (AIR 466) ಪಡೆದಿದ್ದರು. ಕಾನ್‌ಸ್ಟೆಬಲ್ ಆಗಿ ಸೇವೆಗೆ ಸೇರಿ ಎಎಸ್‌ಐ (ASI) ಆಗಿ ನಿವೃತ್ತರಾದ ತಮ್ಮ ತಂದೆಯ ಸ್ಫೂರ್ತಿಯೇ ತಮ್ಮ ಈ ಯಶಸ್ಸಿಗೆ ಕಾರಣ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಮೊದಲ ಮಹಿಳಾ ಡಿಸಿಪಿ: ಗೌತಮ್ ಬುದ್ಧ ನಗರದ ಪ್ರಮುಖ ವಲಯವಾದ ನೋಯ್ಡಾ ವಲಯ-1ಕ್ಕೆ ನೇಮಕಗೊಂಡ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ.
ತಂದೆಯೇ ಸ್ಪೂರ್ತಿ: ಕಾನ್‌ಸ್ಟೆಬಲ್ ಆಗಿ ವೃತ್ತಿಜೀವನ ಆರಂಭಿಸಿ ಎಎಸ್‌ಐ ಹುದ್ದೆ ಅಲಂಕರಿಸಿದ ತಮ್ಮ ತಂದೆಯ ಪ್ರೋತ್ಸಾಹ ಮತ್ತು ಶ್ರಮವೇ ತಮ್ಮ ಸಿವಿಲ್ ಸರ್ವೀಸ್ ಕನಸಿಗೆ ಮುಖ್ಯ ಕಾರಣ ಎಂದು ಪ್ರೀತಿ ಯಾದವ್ ಸ್ಮರಿಸಿದ್ದಾರೆ.
ಎರಡನೇ ಪ್ರಯತ್ನದಲ್ಲಿ ಯಶಸ್ಸು: ಯುಪಿಎಸ್‌ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪಾಸ್ ಮಾಡಿ ಮುಖ್ಯಪರೀಕ್ಷೆಯಲ್ಲಿ ಸ್ವಲ್ಪದರಲ್ಲಿ ಅವಕಾಶ ಕಳೆದುಕೊಂಡಿದ್ದ ಅವರು, ಎರಡನೇ ಪ್ರಯತ್ನದಲ್ಲಿ ಐಪಿಎಸ್ ಹುದ್ದೆಯನ್ನು ಪಡೆದಿದ್ದಾರೆ.
ಮಹಿಳೆಯರ ಸುರಕ್ಷತೆ ಮತ್ತು ಸೈಬರ್ ಭದ್ರತಾ ವಿಭಾಗಗಳಲ್ಲಿ ಅನುಭವ ಹೊಂದಿರುವ ಪ್ರೀತಿ ಯಾದವ್ ಅವರ ಈ ನೂತನೇ ನೇಮಕವು ನೋಯ್ಡಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.





Leave a comment