Home ದಾವಣಗೆರೆ ದಾವಣಗೆರೆ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಲ್ಲಿ ಒಗ್ಗಟ್ಟಿಗೆ ಕುಲಪತಿ ಡಾ. ಹೆಚ್. ಆರ್. ಮಹಾದೇವಸ್ವಾಮಿ ಕರೆ
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಲ್ಲಿ ಒಗ್ಗಟ್ಟಿಗೆ ಕುಲಪತಿ ಡಾ. ಹೆಚ್. ಆರ್. ಮಹಾದೇವಸ್ವಾಮಿ ಕರೆ

Share
ದಾವಣಗೆರೆ
Share

ದಾವಣಗೆರೆ: ಜಿಎಂ ವಿಶ್ವವಿದ್ಯಾನಿಲಯದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಭುವನೇಶ್ವರಿ ತಾಯಿಯ ಆರಾಧಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕೇಂದ್ರೀಯ ಗ್ರಂಥಾಲಯ ಆವರಣದಲ್ಲಿ ಭುವನೇಶ್ವರಿ ತಾಯಿಯ ಫೋಟೋಗೆ ಪುಷ್ಪ ನಮನ ಸಲ್ಲಿಸಿ ಆರಾಧಿಸಲಾಯಿತು.
ಜಿಎಂ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಮಹಾದೇವಸ್ವಾಮಿ ಹೆಚ್.ಆರ್ ಮಾತನಾಡುತ್ತಾ, ಕನ್ನಡಿಗರಲ್ಲಿ ಒಗ್ಗಟ್ಟು ಅತ್ಯಗತ್ಯ ಎಂದು ಕರೆ ನೀಡಿದರು. ಕನ್ನಡ ಭಾಷೆಯಲ್ಲಿ ಮೈಸೂರು ಕನ್ನಡ, ಮಂಗಳೂರು ಕನ್ನಡ, ಉತ್ತರ ಕನ್ನಡ ಹೀಗೆ ವಿವಿಧ ಭಾಷಾವಾರು ಪ್ರಭೇದಗಳಿದ್ದರೂ, ಕನ್ನಡ ಮಾತನಾಡುವ ಎಲ್ಲ ಕನ್ನಡಿಗರೂ ಒಂದೇ ಎಂದು ಪ್ರತಿಪಾದಿಸಿದರು.

ಮುಂದುವರಿದು ಮಾತನಾಡುತ್ತ, “ಕನ್ನಡಿಗರಿಗೆ ಅನ್ಯ ಪ್ರದೇಶದಿಂದ ಬಂದ ವ್ಯಕ್ತಿಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುವ ಕಾತುರತೆ ಇರಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಕನ್ನಡಿಗರು ಅನ್ಯ ರಾಜ್ಯಗಳಿಂದ ಬಂದವರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ, ಕನ್ನಡವನ್ನು ಬೆಳೆಸುವ ಮತ್ತು ಪಸರಿಸುವ ಪ್ರಕ್ರಿಯೆಯಲ್ಲಿ ಹಿಂದುಳಿಯುತ್ತಿದ್ದಾರೆ,” ಎಂದು ಆತಂಕ ವ್ಯಕ್ತಪಡಿಸಿದರು. ಕನ್ನಡ ನಾಡು-ನುಡಿಯ ಬಗ್ಗೆ ಇರುವ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ, ವರ್ಷದುದ್ದಕ್ಕೂ ಹಾಗೂ ಕನ್ನಡಿಗನ ಪ್ರತಿ ಉಸಿರು ಇರುವ ತನಕವೂ ಕನ್ನಡಾಭಮಾನವನ್ನು ಮೆರೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಾಗರ್ ಕನ್ನಡ ರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಪ್ರಾರ್ಥನಾ ಅವರು ಕನ್ನಡ ನಾಡು-ನುಡಿಯ ಹಿರಿಮೆಯನ್ನು ಸಾರುವ ತಮ್ಮ ಸ್ವರಚಿತ ಕವನವನ್ನು ವಾಚಿಸಿ ನೆರೆದಿದ್ದವರ ಮನಸೂರೆಗೊಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಪ್ರತಿನಿಧಿಗಳಾದ ಸುಭಾಷ್ ಚಂದ್ರ ವೈ.ಯು., ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್., ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ, ಜಿಎಂ ಹಾಲಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಓಂಕಾರಪ್ಪ ಹೆಚ್.ಎಸ್, ಕನ್ನಡ ಭಾಷಾ ವಿಭಾಗದ ನಿರ್ದೇಶಕರಾದ ಡಾ. ರೂಪ ಎಂ.ವಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕನ್ನಡಾಂಬೆಗೆ ನಮನ ಸಲ್ಲಿಸಿದರು.

ಕಾರ್ಯಕ್ರಮ ಆಯೋಜಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ದೀಪಾ ಬಿ.ಎಸ್ ನಿರೂಪಿಸಿದರು. ಎನ್‌ಎಸ್‌ಎಸ್‌ ಅಧಿಕಾರಿ ಅಶೋಕ್‌ ಹೆಚ್.ಎಸ್‌ ವಂದಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles