ದಾವಣಗೆರೆ: ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಗಲು ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶೃತಿ ಕೆ.ಎನ್. ಎಂಬುವವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 11,25,000 ರೂ. ಮೌಲ್ಯದ 90 ಗ್ರಾಂ ಚಿನ್ನದ ಆಭರಣಗಳು, 8,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 29.10.2026ರಂದು ಮಧ್ಯಾಹ್ನ ದೂರುದಾರರು ತಮ್ಮ ಮನೆಗೆ ಬೀಗ ಹಾಕಿ ಅಂಗಡಿಗೆ ತೆರಳಿದ್ದ ವೇಳೆ, ಕಳ್ಳರು ಡುಪ್ಲಿಕೇಟ್ ಕೀ ಬಳಸಿ ಮನೆಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿದ್ದರು.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಎಸ್ಪಿ ಶೇಖರ್ ಎಚ್.ಟಿ. ಹಾಗೂ ಡಿವೈಎಸ್‌ಪಿ ಶರಣ ಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್ ಶಿಲ್ಪಾ ವೈ.ಎಸ್. ನೇತೃತ್ವದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಬಸವರಾಜ (56 ವರ್ಷ, ದಾವಣಗೆರೆ) ಮತ್ತು ಕುಮಾರ್ ವೈ. (50 ವರ್ಷ, ಚನ್ನಗಿರಿ ತಾಲ್ಲೂಕು) ಎಂಬ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ: ಪ್ರಕರಣ ದಾಖಲಾದ ಕೇವಲ 24 ಗಂಟೆಗಳ ಒಳಗೆ ಆರೋಪಿಗಳನ್ನು ಪತ್ತೆಹಚ್ಚಿ, ಒಟ್ಟು 11.25 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಇಲಾಖೆ ಪ್ರಶಂಸೆ: ಯಶಸ್ವಿ ಕಾರ್ಯಾಚರಣೆ ನಡೆಸಿದ ವಿದ್ಯಾನಗರ ಇನ್‌ಸ್ಪೆಕ್ಟರ್ ಶಿಲ್ಪಾ ವೈ.ಎಸ್. ಹಾಗೂ ಸಿಬ್ಬಂದಿಯ ಕಾರ್ಯತತ್ಪರತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ಟಿ. ಶ್ಲಾಘಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಮನೆಯ ಬೀಗಗಳನ್ನು ಮ್ಯಾಟ್ ಅಥವಾ ಶೂಗಳ ಕೆಳಗೆ ಇಡುವ ಅಭ್ಯಾಸ ಬಿಡಬೇಕು ಹಾಗೂ ಮನೆಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.





Leave a comment