ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET UG 2026) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಕೇಂದ್ರೀಯ ತನಿಖಾ ದಳ (CBI) ಮಹತ್ವದ ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಪ್ರಮುಖ ಸೂತ್ರಧಾರಿ (Mastermind) ಮನೀಷಾ ಗುರುನಾಥ್ ಮಂಧಾರೆ ಎಂಬಾಕೆಯನ್ನು ಬಂಧಿಸಿದೆ.
ಮಹಾರಾಷ್ಟ್ರದ ಪುಣೆ ಮೂಲದ ಹಿರಿಯ ಸಸ್ಯಶಾಸ್ತ್ರ (Botany) ಉಪನ್ಯಾಸಕಿಯಾಗಿದ್ದ ಈಕೆಯನ್ನು ದೆಹಲಿಯಲ್ಲಿ ಸುದೀರ್ಘ ವಿಚಾರಣೆಯ ಬಳಿಕ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈಕೆಯ ಬಂಧನದೊಂದಿಗೆ ಈ ಹಗರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತಜ್ಞೆಯಾಗಿದ್ದ ಮನೀಷಾ:
ಬಂಧಿತ ಮನೀಷಾ ಮಂಧಾರೆ ಪುಣೆಯ ಶಿವಾಜಿನಗರದಲ್ಲಿರುವ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಕಳೆದ 5 ರಿಂದ 6 ವರ್ಷಗಳಿಂದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಸಮಿತಿಯಲ್ಲಿ ತಜ್ಞೆಯಾಗಿ ಗುರುತಿಸಿಕೊಂಡಿದ್ದರು.
ಈ ಕಾರಣದಿಂದಾಗಿ ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಬಯಾಲಜಿ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) ವಿಭಾಗದ ಪ್ರಶ್ನೆ ಪತ್ರಿಕೆಗಳು ಈಕೆಗೆ ಮುಂಚಿತವಾಗಿಯೇ ಲಭ್ಯವಾಗಿದ್ದವು ಎನ್ನಲಾಗಿದೆ.
ಮನೆಯಲ್ಲೇ ನಡೆದಿತ್ತು ಸೀಕ್ರೆಟ್ ಕೋಚಿಂಗ್ ಕ್ಲಾಸ್!
ಸಿಬಿಐ ಅಧಿಕಾರಿಗಳ ಮಾಹಿತಿ ಪ್ರಕಾರ, ಮನೀಷಾ ಮಂಧಾರೆ ಕಳೆದ ಏಪ್ರಿಲ್ ತಿಂಗಳಲ್ಲಿ ಈ ಹಿಂದೆ ಬಂಧಿತಳಾಗಿದ್ದ ಮನೀಷಾ ವಾಗ್ಮಾರೆ ಎಂಬಾಕೆಯ ಮೂಲಕ ವೈದ್ಯಕೀಯ ಸೀಟು ಆಕಾಂಕ್ಷಿಗಳನ್ನು ಸಂಪರ್ಕಿಸಿದ್ದರು. ಬಳಿಕ ಪುಣೆಯಲ್ಲಿರುವ ತನ್ನ ಸ್ವಗೃಹದಲ್ಲಿಯೇ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸಿದ್ದರು.
ಈ ವೇಳೆ ನೀಟ್ ಪರೀಕ್ಷೆಗೆ ಬರಲಿರುವ ಬಯಾಲಜಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಬರೆಸಲಾಗಿತ್ತು ಹಾಗೂ ಪಠ್ಯಪುಸ್ತಕಗಳಲ್ಲಿ ಗುರುತು ಮಾಡಿಸಲಾಗಿತ್ತು. ಪರೀಕ್ಷೆಯ ದಿನ ಬಂದ ಬಹುತೇಕ ಪ್ರಶ್ನೆಗಳು ಇವರು ನೀಡಿದ್ದ ಪ್ರಶ್ನೆಗಳಿಗೇ ಸಾಮ್ಯತೆ ಹೊಂದಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
ಕೆಮಿಸ್ಟ್ರಿ ಪತ್ರಿಕೆ ಸೋರಿಕೆ ಮಾಡಿದ್ದ ಮತ್ತೊಬ್ಬ ಕಿಂಗ್‌ಪಿನ್ ಪ್ರೊ. ಪಿ.ವಿ. ಕುಲಕರ್ಣಿ ಜೊತೆಗೂ ಈಕೆಗೆ ನಿಕಟ ಸಂಪರ್ಕವಿರುವುದು ದೃಢಪಟ್ಟಿದೆ. ಸದ್ಯ ದೇಶದ 6 ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿರುವ ಸಿಬಿಐ ಲ್ಯಾಪ್‌ಟಾಪ್, ಬ್ಯಾಂಕ್ ದಾಖಲೆ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದೆ. ಪೇಪರ್ ಲೀಕ್ ಹಿನ್ನೆಲೆಯಲ್ಲಿ ಈಗಾಗಲೇ ಹಳೆಯ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಜೂನ್ 21, 2026 ರಂದು ದೇಶಾದ್ಯಂತ ಮರುಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ.
- CBI arrest Manisha Mandhare
- medical entrance scam India
- NEET 2026 paper leak
- NEET Biology question leak
- NEET UG 2026 re-exam date
- NTA expert paper leak
- Pune botany teacher arrested
- PV Kulkarni
- ಎನ್ಟಿಎ ತಜ್ಞೆ ಬಂಧನ
- ನೀಟ್ ಪತ್ರಿಕೆ ಸೋರಿಕೆ 2026
- ನೀಟ್ ಮರುಪರೀಕ್ಷೆ 2026
- ಪಿವಿ ಕುಲಕರ್ಣಿ
- ಪುಣೆ ಉಪನ್ಯಾಸಕಿ ಸಿಬಿಐ ವಶಕ್ಕೆ
- ಬಯಾಲಜಿ ಪೇಪರ್ ಲೀಕ್
- ಮನೀಷಾ ಮಂಧಾರೆ
- ಸಿಬಿಐ ಬಂಧನ





Leave a comment