Home ಕ್ರೈಂ ನ್ಯೂಸ್ ಪಶ್ಚಿಮ ಬಂಗಾಳದಲ್ಲಿ ‘ಆಡಳಿತಗಾರರ ಕಾನೂನಿನ ಯುಗಾಂತ್ಯ, ಇನ್ಮುಂದೆ ‘ಕಾನೂನಿನ ಆಡಳಿತ’: ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಣೆ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪಶ್ಚಿಮ ಬಂಗಾಳದಲ್ಲಿ ‘ಆಡಳಿತಗಾರರ ಕಾನೂನಿನ ಯುಗಾಂತ್ಯ, ಇನ್ಮುಂದೆ ‘ಕಾನೂನಿನ ಆಡಳಿತ’: ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಣೆ

Share
ಪಶ್ಚಿಮ ಬಂಗಾಳ
Share

ಡೈಮಂಡ್ ಹಾರ್ಬರ್: ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಇದ್ದ “ಆಡಳಿತಗಾರರ ಕಾನೂನಿನ” (Ruler’s Law) ಯುಗ ಮುಗಿದಿದ್ದು, ಇನ್ನು ಮುಂದೆ ರಾಜ್ಯದಲ್ಲಿ “ಕಾನೂನಿನ ಆಡಳಿತ” (Rule of Law) ಮಾತ್ರ ನಡೆಯಲಿದೆ ಎಂದು ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಖಡಕ್ ಸಂದೇಶ ನೀಡಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ಶನಿವಾರ ನಡೆದ ಪೊಲೀಸ್ ಆಡಳಿತದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ವಾರವಷ್ಟೇ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ, ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಸುಧಾರಣೆಗಳನ್ನು ಪ್ರಕಟಿಸಿದರು.

ಪೊಲೀಸ್ ಕಲ್ಯಾಣ ಮಂಡಳಿ ರದ್ದು:

ರಾಜ್ಯದ ಪೊಲೀಸ್ ಕಲ್ಯಾಣ ಮಂಡಳಿಯನ್ನು (Police Welfare Board) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು. “ಒಳ್ಳೆಯ ಉದ್ದೇಶದಿಂದ ಈ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ಆದರೆ, ಕಾಲಕ್ರಮೇಣ ಇದು ಒಂದು ರಾಜಕೀಯ ಪಕ್ಷದ ಅಂಗಸಂಸ್ಥೆಯಾಗಿ ಬದಲಾಯಿತು. ನಿವೃತ್ತಿಯ ನಂತರ ಅಕ್ರಮವಾಗಿ ಉದ್ಯೋಗ ವಿಸ್ತರಣೆ ಪಡೆಯಲು ಮತ್ತು ವೈಯಕ್ತಿಕ ಲಾಭ ಮಾಡಿಕೊಳ್ಳಲು ಇದನ್ನು ಬಳಸಿಕೊಳ್ಳಲಾಗಿದೆ” ಎಂದು ಅವರು ಆಕ್ರೋಶ ಹೊರಹಾಕಿದರು. ಮುಂದಿನ ಮೂರು ತಿಂಗಳೊಳಗೆ ಪೊಲೀಸ್ ಸುಧಾರಣೆಗೆ ಹೊಸ ಚೌಕಟ್ಟನ್ನು ರೂಪಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸುಲಿಗೆ ಹಾಗೂ ಕಿರುಕುಳಕ್ಕೆ ಮುಕ್ತಿ:

ಯಾವುದೇ ಸಾಮಾನ್ಯ ನಾಗರಿಕನಿಗೆ ಪೊಲೀಸರಿಂದ ಕಿರುಕುಳ ಉಂಟಾದರೆ, ಅವರು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಬಹುದು. ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಸಿಎಂ ಭರವಸೆ ನೀಡಿದರು. ಇದೇ ವೇಳೆ, ಆಟೋ ರಿಕ್ಷಾ, ಇ-ರಿಕ್ಷಾ ಚಾಲಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಂದ ಸ್ಥಳೀಯ ಗುಂಪುಗಳು ಅಥವಾ ಪೊಲೀಸರ ಕೆಲವು ವಿಭಾಗಗಳು ಹಣ ವಸೂಲಿ ಮಾಡುವುದರ ವಿರುದ್ಧ ‘ಶೂನ್ಯ ಸಹಿಷ್ಣುತೆ’ (Zero-Tolerance) ನೀತಿಯನ್ನು ಪ್ರಕಟಿಸಿದರು. ರಸ್ತೆಗಳಲ್ಲಿ ವಾಹನಗಳನ್ನು ತಡೆದು ಅಕ್ರಮವಾಗಿ ಟೋಲ್ ಅಥವಾ ಹಣ ವಸೂಲಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದರು.

ಪೊಲೀಸರ ರಕ್ಷಣೆಗೆ ಬದ್ಧ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ ಸುವೇಂದು ಅಧಿಕಾರಿ, ಕಾನೂನು ಸುವ್ಯವಸ್ಥೆ ಕಾಪಾಡುವಾಗ ಪೊಲೀಸರ ಮೇಲೆ ದಾಳಿ ಅಥವಾ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Share

Leave a comment

Leave a Reply

Your email address will not be published. Required fields are marked *