ಲಕ್ನೋ: ಉದ್ಯಮಿ ಹಾಗೂ ಆತನ ಪತ್ನಿಯಿಂದ ತೀವ್ರ ಮಾನಸಿಕ ಕಿರುಕುಳಕ್ಕೊಳಗಾಗಿದ್ದ ಸಲೂನ್ ಮ್ಯಾನೇಜರ್ ಆಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಮಹಿಳೆ ವಿಡಿಯೋ ರೆಕಾರ್ಡ್ ಮಾಡಿದ್ದು, ಉದ್ಯಮಿ, ಆತನ ಪತ್ನಿ ಮತ್ತು ಸಹಚರರು ತನಗೆ ನೀಡಿದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ಪೊಲೀಸರು ಸದ್ಯ ಓರ್ವ ಆರೋಪಿಯನ್ನು ಬಂಧಿಸಿದ್ದು, ಮುಖ್ಯ ಆರೋಪಿಗಳಾದ ಉದ್ಯಮಿ ಹಾಗೂ ಆತನ ಪತ್ನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಮೇ 12 ರಂದು ನಡೆದ ಘಟನೆ:
ಮೃತರನ್ನು 31 ವರ್ಷದ ರತ್ನಾ ಸಿಂಗ್ ಎಂದು ಗುರುತಿಸಲಾಗಿದೆ. ಮೇ 12 ರಂದು ಗೋಮತಿನಗರ ವಿಸ್ತಾರದ ಶಾಲಿಮಾರ್ ಒನ್ ವರ್ಲ್ಡ್ ಅಪಾರ್ಟ್‌ಮೆಂಟ್‌ನಲ್ಲಿ ರತ್ನಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೋದಲ್ಲಿ ಅವರು, ಸ್ಥಳೀಯ ಪ್ರಭಾವಿ ಉದ್ಯಮಿ ಶರದ್ ಸಿಂಗ್ ಮತ್ತು ಅವರ ಪತ್ನಿ ಪಲ್ಲವಿ ಜೋಶಿ ತಮಗೆ ವಿಪರೀತ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋದಲ್ಲಿ ವೈಶಾಲಿ, ಮಂಗಲ್ ಯಾದವ್ ಮತ್ತು ಶರದ್ ಸಿಂಗ್ ಅವರ ಇಡೀ ಕುಟುಂಬದ ಹೆಸರನ್ನು ಉಲ್ಲೇಖಿಸಿದ್ದಾರೆ.
ಓರ್ವ ಆರೋಪಿ ಜೈಲಿಗೆ, ಹೋಟೆಲ್ ಸೀಲ್ ಡೌನ್:
ರತ್ನಾ ಸಿಂಗ್ ಅವರ ತಂದೆ ಸುಧೀರ್ ಕುಮಾರ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶರದ್ ಸಿಂಗ್ ಅವರ ಹೋಟೆಲ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ದೇವೋರಿಯಾ ಮೂಲದ ಮಂಗಲ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ, ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಶರದ್ ಸಿಂಗ್‌ಗೆ ಸೇರಿದ ಹೋಟೆಲ್ ಮತ್ತು ಸಲೂನ್ ಅನ್ನು ಪೊಲೀಸರು ಸೀಲ್ ಮಾಡಿದ್ದಾರೆ.
ಮದುವೆ ಮುರಿದುಬೀಳುವಂತೆ ಮಾಡಿದ್ದ ಉದ್ಯಮಿ:
ಮೃತರ ತಂದೆ ಸುಧೀರ್ ಸಿಂಗ್ ಅವರು ಉದ್ಯಮಿ ಶರದ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಶರದ್ ಸಿಂಗ್ ನನ್ನ ಮಗಳನ್ನು ನಿರಂತರವಾಗಿ ಶೋಷಿಸುತ್ತಿದ್ದ. ಆಕೆ ಇದನ್ನು ವಿರೋಧಿಸಿದಾಗಲೆಲ್ಲಾ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಜೊತೆಗೆ ಆಕೆಯ ತಂಗಿಯರ ಹೆಸರನ್ನು ಕೆಡಿಸುವುದಾಗಿ ಹೆದರಿಸುತ್ತಿದ್ದ. ಇತ್ತೀಚೆಗೆ ರತ್ನಾ ಮದುವೆ ಮತ್ತೊಬ್ಬರ ಜೊತೆ ನಿಶ್ಚಯವಾದಾಗ, ಶರದ್ ಸಿಂಗ್ ಆಕೆಯ ಕೆಲವು ಕಾಲ್ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳನ್ನು ಹುಡುಗನ ಕುಟುಂಬಕ್ಕೆ ಕಳುಹಿಸಿದ್ದ. ಇದರಿಂದಾಗಿ ಮದುವೆ ಮುರಿದುಬಿದ್ದಿತ್ತು” ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.
‘ವಿರಾಸತ್’ ಎಂಬ ಕಂಪನಿ ನಡೆಸುತ್ತಿರುವ ಉದ್ಯಮಿ ಶರದ್ ಸಿಂಗ್ ಹಾಗೂ ಆತನ ಪತ್ನಿ ಪಲ್ಲವಿ ಜೋಶಿ ಸದ್ಯ ತಲೆಮರೆಸಿಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಸ್ನೇಹಿತರಾಗಿದ್ದು, ಅವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
- abetment to suicide
- Gomtinagar Vistar Lucknow
- Lucknow crime news
- Lucknow salon manager suicide
- Mangal Yadav arrested
- Pallavi Joshi
- Ratna Singh suicide case
- Sharad Singh Virasat company
- ಆತ್ಮಹತ್ಯೆಗೆ ಪ್ರಚೋದನೆ
- ಗೋಮತಿನಗರ ವಿಸ್ತಾರ್ ಲಕ್ನೋ
- ಪಲ್ಲವಿ ಜೋಶಿ
- ಮಂಗಲ್ ಯಾದವ್ ಬಂಧನ
- ರತ್ನಾ ಸಿಂಗ್ ಆತ್ಮಹತ್ಯೆ ಪ್ರಕರಣ
- ಲಕ್ನೋ ಕ್ರೈಮ್ ನ್ಯೂಸ್
- ಲಕ್ನೋ ಸಲೂನ್ ಮ್ಯಾನೇಜರ್ ಆತ್ಮಹತ್ಯೆ
- ಶರದ್ ಸಿಂಗ್ ವಿರಾಸತ್ ಕಂಪನಿ





Leave a comment