Home ದಾವಣಗೆರೆ ಬಂದೂಕು ತೋರಿಸಿ ದರೋಡೆಗೆ ಯತ್ನ: ಜ್ಯುವೆಲ್ಲರಿ ಶಾಪ್ ಮಾಲೀಕ ಮತ್ತು ಸಿಬ್ಬಂದಿಯಿಂದ ಭಾರೀ ಪ್ರತಿರೋಧ, ಸಾರ್ವಜನಿಕರ ಮೆಚ್ಚುಗೆ!
ದಾವಣಗೆರೆಬೆಂಗಳೂರುವಾಣಿಜ್ಯ

ಬಂದೂಕು ತೋರಿಸಿ ದರೋಡೆಗೆ ಯತ್ನ: ಜ್ಯುವೆಲ್ಲರಿ ಶಾಪ್ ಮಾಲೀಕ ಮತ್ತು ಸಿಬ್ಬಂದಿಯಿಂದ ಭಾರೀ ಪ್ರತಿರೋಧ, ಸಾರ್ವಜನಿಕರ ಮೆಚ್ಚುಗೆ!

Share
ಬಂದೂಕು
Share

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪಂಚವಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾವಾಡಿ ಪ್ರದೇಶದಲ್ಲಿ ರಾತ್ರಿ ವೇಳೆ ಜ್ಯುವೆಲ್ಲರಿ ಅಂಗಡಿಯೊಂದಕ್ಕೆ ನುಗ್ಗಿದ ಸಶಸ್ತ್ರ ದರೋಡೆಕೋರರ ತಂಡವನ್ನು ಅಂಗಡಿಯ ಮಹಿಳಾ ಮಾಲೀಕರು ಹಾಗೂ ಸಿಬ್ಬಂದಿ ಧೈರ್ಯದಿಂದ ಎದುರಿಸಿ, ದರೋಡೆ ಯತ್ನವನ್ನು ವಿಫಲಗೊಳಿಸಿರುವ ರೋಮಾಂಚಕ ಘಟನೆ ನಡೆದಿದೆ. ಈ ಇಡೀ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಂದೂಕು ತೋರಿಸಿ ಹೆದರಿಸಿದರೂ ಮಹಿಳಾ ಮಾಲಕಿ ಮತ್ತು ಸಿಬ್ಬಂದಿ ಧೈರ್ಯದಿಂದ ಎದುರಿಸಿದ್ದು ಭಾರೀ ಪ್ರಶಂಸೆಗೂ ಪಾತ್ರವಾಗಿದೆ.

ಹಿರಾವಾಡಿ ರಸ್ತೆಯಲ್ಲಿರುವ ‘ನ್ಯೂ ಸಮೃದ್ಧಿ ಜ್ಯುವೆಲ್ಲರ್ಸ್’ ಅಂಗಡಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 9 ರಿಂದ 9:30 ರ ಅವಧಿಯಲ್ಲಿ ವ್ಯಾಪಾರ ಮುಗಿಸಿ ಮಾಲೀಕರಾದ ನೈನಾ ಪಗಾರಿಯಾ ಹಾಗೂ ಸಿಬ್ಬಂದಿ ಒಡವೆಗಳನ್ನು ಪ್ಯಾಕ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೂರು ಮೋಟಾರ್ ಸೈಕಲ್‌ಗಳಲ್ಲಿ ಬಂದ ಆರು ಮಂದಿ ಮುಖವಾಡ ಧರಿಸಿದ ದರೋಡೆಕೋರರು ಏಕಾಏಕಿ ಅಂಗಡಿಯೊಳಗೆ ನುಗ್ಗಿದ್ದಾರೆ. ಅವರಲ್ಲಿ ಒಬ್ಬ ಸಿಬ್ಬಂದಿ ಮೇಲೆ ಪಿಸ್ತೂಲ್ ಗುರಿಯಿಟ್ಟು ಬೆದರಿಸಿದ್ದಾನೆ.

ದರೋಡೆಕೋರರು ಬಂದೂಕು ತೋರಿಸಿ ಒಡವೆಗಳನ್ನು ದೋಚಲು ಯತ್ನಿಸಿದಾಗ, ಅಂಗಡಿಯಲ್ಲಿದ್ದ ಸಿಬ್ಬಂದಿ ಅಮಿತ್ ಶ್ರೀಮಾಲ್ ಅವರು ಯಾವುದೇ ಹೆದರಿಕೆಯಿಲ್ಲದೆ ದರೋಡೆಕೋರರನ್ನು ಬರಿಗೈಯಲ್ಲೇ ತಳ್ಳಲು ಮುಂದಾಗಿದ್ದಾರೆ. ಇದನ್ನು ಕಂಡು ಧೃತಿಗೆಡದ ಮಹಿಳಾ ಮಾಲೀಕ ನೈನಾ ಪಗಾರಿಯಾ ಅವರು ಕೂಡ ಕೌಂಟರ್ ಮೇಲಿದ್ದ ತಟ್ಟೆಯನ್ನು ದರೋಡೆಕೋರರ ಮೇಲೆ ಎಸೆದು, ಕೌಂಟರ್ ಮೇಲೇರಿ ಅವರನ್ನು ಹಿಡಿಯಲು ಸಾಹಸ ಪ್ರದರ್ಶಿಸಿದ್ದಾರೆ. ಅಂಗಡಿ ಮಾಲೀಕರು ಮತ್ತು ಸಿಬ್ಬಂದಿಯ ಈ ಭೀಕರ ಪ್ರತಿರೋಧದಿಂದ ಗಾಬರಿಗೊಂಡ ದರೋಡೆಕೋರರು ದೊಡ್ಡ ಮಟ್ಟದ ದರೋಡೆ ಮಾಡಲು ಸಾಧ್ಯವಾಗದೆ, ಸಿಕ್ಕ ಕೆಲವು ಬ್ಯಾಗ್‌ಗಳನ್ನು ಮಾತ್ರ ಹಿಡಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ಜಟಾಪಟಿಯ ಸಂದರ್ಭದಲ್ಲಿ ದರೋಡೆಕೋರರು ಸಿಬ್ಬಂದಿ ಅಮಿತ್ ಶ್ರೀಮಾಲ್ ಅವರ ತಲೆಗೆ ಪಿಸ್ತೂಲ್‌ನ ಹಿಂಭಾಗದಿಂದ (ಬಟ್) ಬಲವಾಗಿ ಹೊಡೆದಿದ್ದಾರೆ. ಇದರಿಂದಾಗಿ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪಂಚವಟಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿವಿಧ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಮಧ್ಯರಾತ್ರಿಯ ವೇಳೆಗೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಉಪ ಪೊಲೀಸ್ ಕಮಿಷನರ್ ಮೋನಿಕಾ ರಾವತ್ ತಿಳಿಸಿದ್ದಾರೆ. ಒಡವೆ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಯ ಈ ಅಪ್ರತಿಮ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *