ಭುವನೇಶ್ವರ್: ಮಾಜಿ ಸಿಎಂ ನವೀನ್ ಪಾಟ್ನಾಯಕ್ ಅವರ ಆಪ್ತ, ಮಾಜಿ ಅಧಿಕಾರಿ ವಿ.ಕೆ. ಪಾಂಡಿಯನ್ ಅವರು ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಈಗ ನಾನು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದೇನೆ. ಇಷ್ಟು ವರ್ಷಗಳ ರಾಜಕೀಯ ಪ್ರಯಾಣದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇದಕ್ಕಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿದಂತೆ ಇಡೀ ಬಿಜು ಪರಿವಾರದ ಕ್ಷಮೆ ಯಾಚಿಸುತ್ತೇನೆ. ಬಿಜೆಡಿ ಸೋಲಿಗೆ ತಾನು ಕಾರಣವೆನಿಸಿದರೆ ದಯವಿಟ್ಟು ಕ್ಷಮಿಸಿ ಎಂದು ಪಾಂಡ್ಯನ್ ವಿಡಿಯೋ ಸಂದೇಶದಲ್ಲಿ ಕೇಳಿಕೊಂಡಿದ್ದಾರೆ.
ತಾನು ಚುನಾವಣಾ ಪ್ರಚಾರ ನಡೆಸಿದ್ದರಿಂದ ಪಕ್ಷ ಸೋಲಪ್ಪಿತು ಎಂದು ಅನಿಸಿದರೆ ಬಿಜೆಡಿ ಕಾರ್ಯಕರ್ತರು ಮತ್ತು ನಾಯಕರು ತಮ್ಮನ್ನು ಕ್ಷಮಿಸಬೇಕು. ತಾನು ರಾಜಕಾರಣಕ್ಕೆ ಬಂದು ಆಸ್ತಿ ಹೆಚ್ಚಿಸಿಕೊಂಡಿಲ್ಲ. ಸರ್ಕಾರಿ ಸೇವೆಯಲ್ಲಿ ಗಳಿಸಿದ ಆಸ್ತಿಯೇ ಈಗಲೂ ಉಳಿದಿರುವುದು. ರಾಜಕೀಯಕ್ಕೆ ಸೇರುವ ನನ್ನ ಉದ್ದೇಶವು ನವೀನ್ ಬಾಬುಗೆ ಸಹಾಯ ಮಾಡುವುದಾಗಿತ್ತು. ಈಗ ನಾನು ಪ್ರಜ್ಞಾಪೂರ್ವಕವಾಗಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ತಮ್ಮ ಹೃದಯ ಸದಾ ಕಾಲ ಒಡಿಶಾ ಜನರಿಗಾಗಿ ಮತ್ತು ಜಗನ್ನಾಥ ದೇವರಿಗಾಗಿ ಮಿಡಿಯುತ್ತಿರುತ್ತದೆ ಎಂದು ಪಾಂಡಿಯನ್ ತಿಳಿಸಿದ್ದಾರೆ.