SUDDIKSHANA KANNADA NEWS/ DAVANAGERE/ DATE:29-02-2024
ದಾವಣಗೆರೆ: ಮದುವೆ ಮನೆಗಳಲ್ಲಿ ನೀಡುತ್ತಿದ್ದ ಮುಯ್ಯಿ ಈಗ ದ್ವೇಷಕ್ಕೆ ತಿರುಗಿದೆ. ಸಿರಿವಂತಿಕೆ ಜೊತೆಗೆ ಹೃದಯ ಶ್ರೀಮಂತಿಕೆ ಮರೆಯಬಾರದು ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸಲಹೆ ನೀಡಿದರು.
ಸಿರಿಗೆರೆ ಸಮೀಪದ ಸೀಗೇಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿರುವ ಬಸವೇಶ್ವರ ದೇವಾಲಯ ಉದ್ಭಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಕಣ್ಮರೆಯಾಗುತ್ತಿರುವ ಸಂಪ್ರದಾಯ ಉಳಿಸಿ ಎಂದು ಕರೆ ನೀಡಿದರು.
ಸೀಗೇಹಳ್ಳಿಯಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನೀರಿನ ಬವಣೆ ನೀಗಿಸಿದ ಶ್ರೀ ಜಗದ್ಗುರುಗಳವರಿಗೆ ಗ್ರಾಮಸ್ಥರು ಭಕ್ತಿ ನಮನ ಸಲ್ಲಿಸಿದರು.
ಬದುಕಿಗೆ ಸಿಂಚನ ನೀಡುತ್ತಿದ್ದ ಹಲವಾರು ಪುರಾತನ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಆಗಬೇಕು. ಮದುವೆ ಸಂದರ್ಭದಲ್ಲಿ ಹಿಂದೆ ಮುಯ್ಕಿ ಹಾಕುವ ಪದ್ಧತಿ ಇತ್ತು. ನೂತನ ವಧು-ವರರು ಧರಿಸುತ್ತಿದ್ದ ಬಾಸಿಂಗವನ್ನು ಮುಂದಿನ ಒಂದು ವರ್ಷದವರೆಗೆ ಇಲ್ಲವೇ ಮನೆಗೆ ಮಗು ಬರುವವರೆಗೆ ಕಾಪಾಡಲಾಗುತ್ತಿತ್ತು. ಈಗ ಅಂತಹ ಸಂಪ್ರದಾಯ ಕಾಣೆಯಾಗಿದೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ಭರಮಸಾಗರ ಏತ ನೀರಾವರಿ ಯೋಜನೆಯಿಂದ ಈ ಭಾಗದ ಜನರ ಬದುಕು ಸುಧಾರಣೆಯಾಗುತ್ತಿದೆ. ಹಳ್ಳಿಗಳಲ್ಲೂ ಆಧುನಿಕ ಮನೆಗಳು ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಸಿರಿವಂತಿಕೆಯ ಜೊತೆ ಹೃದಯ ಶ್ರೀಮಂತಿಕೆಯನ್ನು ಮರೆಯಬಾರದು ಎಂದು ಸೂಚಿಸಿದರು.
ಭರಮಸಾಗರದಲ್ಲಿನಡೆಯಬೇಕಿದ್ದ ತರಳಬಾಳು ಹುಣ್ಣಿಮೆ ರದ್ದು ಮಾಡಿ 3 ದಿನಗಳ ಕಾಲ ಸಿರಿಗೆರೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ತಮ್ಮ ನಿರೀಕ್ಷೆಗೊ ಮೀರಿಕಾಣಿಕೆ ಸಲ್ಲಿಸಿದರು. ಮೂರು ದಿನಗಳ ಕಾಲ ದಾಸೋಹವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅನುಕೂಲವಾಯಿತು ಎಂದು ತಿಳಿಸಿದರು.
ಅಕ್ಕಮಹಾದೇವಿಯ ವಚನಗಳಲ್ಲಿ ದೇವರ ಬಗೆಗೆ ಅಕೆಗಿರುವ ಅದಮ್ಮ ವಿಶ್ವಾಸವನ್ನು ಕಾಣಬಹುದು. ಹಾಗೆಯೇ ರಾಷ್ಟ್ರಕವಿ ಶಿವರುದ್ರಪ್ಪನವರು. ಸಹ ಆಸ್ತಿಕರೇ ಆಗಿದ್ದರು. ಎಲ್ಲೋ ಹುಡುಕಿದೆ ಇಲ್ಲದ ದೇವರ ಎಂಬ ಕವಿತೆಯಲ್ಲಿ ಅವರು ದೇವರನ್ನು ನಿರಾಕರಣೆ ಮಾಡಿಲ್ಲ ಎಂದು ವಿಶ್ಲೇಷಿಸಿದರು.
ದೇವಾಲಯ ನಿರ್ಮಾಣಕ್ಕೆ ಸಹಕರಿಸಿದವರನ್ನು ಶ್ರೀಗಳು ಗೌರವಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ ಭೈರಪ್ಪ, ಪಿಡಿಒ ಹನ್ನಿರಾಬಾನು, ಫಾಲಾಕ್ಷಪ್ಪ, ಕುಬೇರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್,ತರಳಬಾಳು ಯೂತ್ಸ್ ತಂಡ, ಗ್ರಾಮಸ್ಥರು ಭಾಗವಹಿಸಿದ್ದರು. ದಾವಣಗೆರೆಯ ಗುರು ಪಂಚಾಕ್ಷರ ಸಂಗೀತ ವಿದ್ಕಾಲಯದ ಟಿ.ಎಚ್.ಎಂ. ಶಿವಕುಮಾರಸ್ವಾಮಿ ತಂಡದವರು ವಚನ ಗೀತೆಗಳನ್ನು ಹಾಡಿದರು. ಗ್ರಾಮದ ವಾಣಿಜ್ಯೋದ್ಯಮಿ ಎಸ್. ಬಿ.ಮಂಜಪ್ಪ ಸ್ವಾಗತಿಸಿದರು. ರಾಜಶೇಖರಯ್ಯ ನಿರೂಪಣೆ ಮಾಡಿದರು.