SUDDIKSHANA KANNADA NEWS/ DAVANAGERE/ DATE:25-01-2025
ದಾವಣಗೆರೆ: ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಮಹಿಳೆಯೊಬ್ಬರಿಗೆ ಮೈಕ್ರೋ ಫೈನಾನ್ಸ್ ಅವರು ಕಿರುಕುಳ ನೀಡಿದ ಮಾಹಿತಿ ಸಿಗುತ್ತಿದ್ದಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಹಿಳೆಯ ಮನೆಗೆ ತೆರಳಿ ಧೈರ್ಯ ತುಂಬಿದರು. ಈ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಕರೆ ಮಾಡಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಕುಳಗಟ್ಟೆ ಗ್ರಾಮದ ಹಾಲಮ್ಮ ಪತಿಗೆ ಆಪರೇಷನ್ ಆಗಿದೆ. ಬಲವಂತವಾಗಿ ಮೈಕ್ರೋ ಫೈನಾನ್ಸ್ ನವರು ಕಿರುಕುಳ, ತೊಂದರೆ ಕೊಟ್ಟಿದ್ದಾರೆ. ಧೈರ್ಯ ತುಂಬಿದ್ದೇವೆ. ಯೋಚನೆ ಮಾಡಬೇಡ. ನಾವಿದ್ದೇವೆ ನಿಮ್ಮ ಜೊತೆಗೆ ಎಂಬ ಭರವಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ನವರು ಸಮಯ ಕೊಡಬೇಕು. ಮೀಟರ್ ಬಡ್ಡಿ ವಸೂಲಿ ಮಾಡಿದರೆ ರಾಜ್ಯದಿಂದಲೇ ಓಡಿಸುತ್ತೇನೆ. ರಾಜ್ಯದಲ್ಲಿ ಹಗಲುದರೋಡೆ ಆಗುತ್ತಿದೆ. ಸರ್ಕಾರ ಜಾಣಕುರುಡುತನ ತೋರಿಸುತ್ತಿದೆ. ಸ್ವಸಹಾಯ ಗುಂಪು ಮಾಡಿಕೊಂಡು
ಕೂಡಿಟ್ಟ ಹಣದಿಂದ ಮಹಿಳೆಯರು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ವಾರ ಹಣ ಪಾವತಿ ಮತ್ತು ಪಡೆಯುವುದು ಮಾಡುತ್ತಾರೆ. ಪುರುಷರು ಲೇವಾದೇವಿ ಮಾಡಿದರೂ ವೈಫಲ್ಯ ಆಗಿದೆ. ಎಲ್ಲಾ ಕಡೆ ಸ್ವಸಹಾಯ ಸಂಘ ಯಶಸ್ವಿಯಾಗಿದೆ. ಮೀಟರ್ ಬಡ್ಡಿ ವಸೂಲಿ ಮಾಡಿದರೆ ರಾಜ್ಯದುದ್ದಗಲಕ್ಕೂ ಹೋರಾಟ ಮಾಡುತ್ತೇವೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಕರೆ ಮಾಡಿದ ರೇಣುಕಾಾರ್ಯ, ಕುಳಗಟ್ಟೆ ಹೋಗಿದೆಯಲ್ವಾ, ಹತ್ತು ನಿಮಿಷ ಕೊಡಲ್ಲಾ. ಆತ್ಮಹತ್ಯೆ ಮಾಡಿಕೊಂಡರೆ ಮಾಡಿಕೊಳ್ಳಿ ಎಂದು ಉದ್ದಟತನ ಮಾಡುತ್ತೀರಾ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ
ವಿವಾದ ಭುಗಿಲೆದ್ದಿದೆ. ಸಾಲ ಕೊಟ್ಟಿದ್ದೀರಿ. ಕಟ್ಟಿ ಎಂದು ಹೇಳುತ್ತಿದ್ದೇವೆ. ತೊಂದರೆ ಕೊಡಬೇಡಿ. ಸಿಕ್ಕಾಪಟ್ಟೆ ಬಡ್ಡಿ ಹಾಕಬೇಡಿ. ಕುಳಗಟ್ಟೆಗೆ ಬಂದು ತೊಂದರೆ ಕೊಟ್ಟಿದ್ದಾರೆ. ಕಣ್ಣೀರಾಕಿ ಮಹಿಳೆಯರು ಫೋನ್ ಮಾಡಿದ್ದರು. ಹಾಗಾಗಿ ಬಂದಿದ್ದೇವೆ. ಸಮಯ ಕೊಡಿ, ಕಟ್ಟಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕೊಲೆಗಡುಕ, ಕಟುಕರ ಸರ್ಕಾರ ಇದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಸಾಮಾನ್ಯ ಜನರ ರಕ್ಷಣೆ ಮಾಡುತ್ತಿಲ್ಲ. ಮೈಕ್ರೋ ಫೈನಾನ್ಸ್ ಖಾಸಗಿಯಾಗಿ ರಾಜ್ಯದ ಉದ್ದಗಲಕ್ಕೂ ಮಹಿಳೆಯರಿಗೆ ಸಾಲ ಕೊಟ್ಟಿದೆ. ಗೌರವದಿಂದ ಸಾಲ ಮರುಪಾವತಿ ಮಾಡಿದ್ದಾರೆ. ಕುಟುಂಬದ ನಿರ್ವಹಣೆ ಹಾಗೂ ಆರ್ಥಿಕವಾಗಿ ತೊಂದರೆಯಾದಾಗ ಪಾವತಿ ಸ್ವಲ್ಪ ನಿಧಾನವಾಗಿದೆ. ಕುಳಗಟ್ಟೆ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಫೈನಾನ್ಸ್ ಕಿರುಕುಳ ಜಾಸ್ತಿಯಾಗುತ್ತಿದೆ. ಮನೆಯಲ್ಲಿ ಇರಲು ಬಿಡುತ್ತಿಲ್ಲ. ಈ ಸರ್ಕಾರ ಮೌನವಾಗಿದೆ. ಸಿಎಂ ಸಿದ್ದರಾಮಯ್ಯರು ಹೇಳಿದ್ದಾರೆ ನಿಜ. ಆದ್ರೆ, ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕು. ಮೈಕ್ರೋ ಫೈನಾನ್ಸ್ ಇಲ್ಲವೇ ಸರ್ಕಾರವೇ ಕೊಡಲಿ ಎಂದು ಒತ್ತಾಯಿಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಏನ್ ಮಾಡುತ್ತಿದ್ದಾರೆ? ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡುತ್ತಿದ್ದಾರೆ. ಗಂಭೀರವಾಗಿ ಪರಿಗಣಿಸಬೇಕು. ಬಲವಂತವಾಗಿ ವಸೂಲಿ ಮಾಡಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಸಾಲ ಕೊಟ್ಟಿದ್ದಾರೆ, ಮರುಪಾವತಿ ಮಾಡುತ್ತಾರೆ. ಸಂಸ್ಥೆ ಉದ್ದಾರವಾಗಬೇಕೆಂದರೆ ಸಾಲ ಮರುಪಾವತಿಯೂ ಮುಖ್ಯ. ಮೀಟರ್ ಬಡ್ಡಿ ವಸೂಲಿ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಸಿಬ್ಬಂದಿ ವರ್ಗಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಎಂ. ಪಿ. ರೇಣುಕಾಚಾರ್ಯ ಗುಡುಗಿದರು.