SUDDIKSHANA KANNADA NEWS/ DAVANAGERE/ DATE:05-10-2024
ದಾವಣಗೆರೆ: ಸಾರ್ವಜನಿಕ ಹಿಂದೂಮಹಾಗಣಪತಿ ಟ್ರಸ್ಟ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ದಾವಣಗೆರೆ ಜನರಿಗೆ ಹಬ್ಬದಂತಾಗಿತ್ತು. ಯುವಕರು, ಯುವತಿಯರು, ಪುರುಷರು, ಮಹಿಳೆಯರು ಡಿಜೆಗೆ ಸೌಂಡ್ ಗೆ ಸಖತ್ತಾಗಿಯೇ ಸ್ಟೆಪ್ ಹಾಕಿದರು. ಇನ್ನು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರ ನೃತ್ಯ ನೋಡುಗರ ಗಮನ ಸೆಳೆಯಿತಲ್ಲದೇ, ಎಲ್ಲರೂ ಕುಣಿದು ಕುಪ್ಪಳಿಸಿದರು.
ಎಂ. ಪಿ. ರೇಣುಕಾಚಾರ್ಯ ಅವರು ಶೋಭಯಾತ್ರೆಗೆ ಬರುತ್ತಿದ್ದಂತೆ ಯುವಕರು ಆತ್ಮೀಯವಾಗಿ ಬರಮಾಡಿಕೊಂಡರು. ಡಿಜೆ ಸೌಂಡ್ ಗೆ ರೇಣುಕಾಚಾರ್ಯ ಅವರಿಗೆ ನೃತ್ಯ ಮಾಡುವಂತೆ ಮನವಿ ಮಾಡಿದರು. ಯುವಕರ ಜೊತೆ ರೇಣುಕಾಚಾರ್ಯ ಅವರು ಸ್ಟೆಪ್ ಹಾಕುತ್ತಿದ್ದಂತೆ ಯುವಕರು ಮತ್ತಷ್ಟು ಉತ್ಸಾಹಗೊಂಡು ಕುಣಿದು ಕುಪ್ಪಳಿಸಲು ಆರಂಭಿಸಿದರು. ಈ ವೇಳೆ ರೇಣುಕಾಚಾರ್ಯ ಅವರನ್ನು ಯುವಕರು ಎತ್ತಿಕೊಂಡು ಕುಣಿದು ಸಂಭ್ರಮಿಸಿದರು.
ಇನ್ನು ರೇಣುಕಾಚಾರ್ಯ ಅವರು ಬರುತ್ತಿದ್ದಂತೆ ಸ್ಥಳದಲ್ಲಿದ್ದ ಯುವತಿಯರು, ಯುವಕರು ಸೇರಿದಂತೆ ಹಲವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಯಾರಿಗೂ ನಿರಾಸೆ ಮೂಡಿಸದೇ ರೇಣುಕಾಚಾರ್ಯ ಅವರು ಸೆಲ್ಫಿಗೆ ಫೋಸ್ ನೀಡಿದರು. ಯುವತಿಯರಂತೂ ರೇಣುಕಾಚಾರ್ಯ ಅವರ ಸೆಲ್ಫಿ ಪಡೆದು ಖುಷಿಪಟ್ಟರು. ಯುವಕರೂ ಸಹ ರೇಣುಕಾಚಾರ್ಯ ಅವರು ಹೋಗುವವರೆಗೂ ಜೈ ಜೈ ಹೊನ್ನಾಳಿ ಹುಲಿ, ರೇಣುಕಾಚಾರ್ಯರಿಗೆ ಜೈ ಎಂಬ ಘೋಷಣೆಗಳನ್ನು ಹಾಕಿದರು.
ಇದಕ್ಕೂ ಮುನ್ನ ನಗರದಲ್ಲಿ ಆಯೋಜಿಸಿದ್ದ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣೇಶನಿಗೆ ಭಕ್ತಿ ಸಮರ್ಪಿಸಿದರಲ್ಲದೇ, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ್,
ಪ್ರವೀಣ್ ಜಾಧವ್, ಚಂದ್ರಶೇಖರ್ ಪೂಜಾರಿ ಸೇರಿದಂತೆ ಜಿಲ್ಲೆಯ ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.