Home ನಿಯಮ ಉಲ್ಲಂಘಿಸುವ, ಅನಗತ್ಯ ಸಿಸೇರಿಯನ್ ಹೆರಿಗೆ ಹಾಗೂ ಭ್ರಷ್ಟಾಚಾರಕ್ಕೆ ಬ್ರೇಕ್: ಆಸ್ಪತ್ರೆಗಳ ಪರವಾನಗಿ ರದ್ದತಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆದೇಶ!
Homeದಾವಣಗೆರೆನವದೆಹಲಿಬೆಂಗಳೂರು

ನಿಯಮ ಉಲ್ಲಂಘಿಸುವ, ಅನಗತ್ಯ ಸಿಸೇರಿಯನ್ ಹೆರಿಗೆ ಹಾಗೂ ಭ್ರಷ್ಟಾಚಾರಕ್ಕೆ ಬ್ರೇಕ್: ಆಸ್ಪತ್ರೆಗಳ ಪರವಾನಗಿ ರದ್ದತಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆದೇಶ!

Share
ಡಾ. ಪ್ರಭಾ ಮಲ್ಲಿಕಾರ್ಜುನ್
Share
ದಾವಣಗೆರೆ: ನಗರ ಪ್ರದೇಶದಲ್ಲಿ ಜಪಾನ್ ದೇಶದ “ಮಿಯಾವಾಕಿ ಅರಣ್ಯ”  ಮಾದರಿಯಲ್ಲಿ ಒಂದು ಅರಣ್ಯ ಪ್ರದೇಶ ನಿರ್ಮಿಸಬೇಕು. ಈ ವರ್ಷ ನಿಗದಿತ ಅವಧಿಯಲ್ಲಿ ಮಳೆ ಆಗದೆ ಇರುವುದರಿಂದ ಜಾನುವಾರು ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮವಹಿಸುವಂತೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಜಗಳೂರು ವಾಲ್ಮೀಕಿ ಭವನದಲ್ಲಿ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮಿಯಾವಾಕಿ ಅರಣ್ಯ” ಇದನ್ನು ಜಪಾನಿನ ಸಸ್ಯಶಾಸ್ತ್ರಜ್ಞರಾದ ಅಕಿರಾ ಮಿಯಾವಾಕಿ ಅವರು ಅಭಿವೃದ್ಧಿಪಡಿಸಿದ್ದರಿಂದ ಈ ಹೆಸರು ಬಂದಿದೆ. ಸ್ಥಳೀಯ ಮರಗಳನ್ನು ಬಳಸಿ, ಕಡಿಮೆ ಜಾಗದಲ್ಲಿ ಅತ್ಯಂತ ವೇಗವಾಗಿ ಮತ್ತು ದಟ್ಟವಾದ ಕಾಡನ್ನು ಬೆಳೆಸುವ ತಂತ್ರಜ್ಞಾನ ಇದಾಗಿದೆ. ಕರ್ನಾಟಕದ ಅನೇಕ ನಗರಗಳಲ್ಲಿ ಪರಿಸರವನ್ನು ಹೆಚ್ಚಿಸಲು ಈ ಮಾದರಿಯನ್ನು ಅಳವಡಿಸಿಕೊಳ್ಳಲು ಕ್ರಮವಹಿಸುವಂತೆ ತಿಳಿಸಿದರು.
ಗ್ರಾಮೀಣ ನೀರು ಸರಬರಾಜು ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಗ್ರಾಮೀಣ ನೀರು ಸರಬರಾಜು  ಇಲಾಖೆಯಡಿ ಕೈಗೊಳ್ಳಲಾಗಿರುವ ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಮಾಡಿ ರಸ್ತೆ ಮತ್ತು ಪೈಪ್‌ಲೈನ್ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಈ ಇಲಾಖೆಗಳಿಗೆ ಎಚ್ಚರಿಕೆ ನೀಡಿದರು.
ಜಗಳೂರು ವಿಧಾನಸಭಾ ಸದಸ್ಯರಾದ ದೇವೇಂದ್ರಪ್ಪ ಅವರು ಮಾತನಾಡಿ ಜಗಳೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಜೆ.ಜೆ.ಎಂ ಅಡಿ ಅಳವಡಿಸಿರುವ ನಲ್ಲಿ ಮತ್ತು ಪರಿಕರಗಳನ್ನು ಕಳವು ಮಾಡಲಾಗಿದೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೃಷಿ ಮತ್ತು ಇಂಧನ ಇಲಾಖೆ:

ರೈತರಿಗೆ ಸೌರಶಕ್ತಿ ಆಧಾರಿತ ಪಂಪ್‌ಸೆಟ್‌ಗಳನ್ನು ಒದಗಿಸುವ ಪಿಎಂ-ಕುಸುಮ್  ಯೋಜನೆಯ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಇದರೊಂದಿಗೆ ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆಗೆ ಮತ್ತು ಕೃಷಿ ಉತ್ತೇಜನಕ್ಕೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.  ಹೈನುಗಾರಿಕೆಯಡಿ ಹಾಲಿನಿಂದ ಇತರೆ ಉತ್ಪಾದಕತೆಯನ್ನು ಕೈಗೊಳ್ಳಲು ಕ್ರಮ ವಹಿಸಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಆರ್ಥಿಕ  ಬಲವರ್ಧನೆಗೆ ಎಪ್.ಪಿ.ಓ ಮಾದರಿಯಲ್ಲಿ ಕ್ರಮ ಕೈಗೊಳ್ಳಲು ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಮಹಿಳಾ ಸಬಲೀಕರಣಕ್ಕೆ ಎನ್.ಆರ್.ಎಲ್.ಎಂ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸುವಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ,  ಪರಿಶಿಷ್ಟ ಪಂಗಡ , ಹಿಂದುಳಿದ ವರ್ಗಗಳು  ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ನಿಲಯಗಳು, ವಿದ್ಯಾರ್ಥಿವೇತನ ಮತ್ತು ವಿವಿಧ ಸೌಲಭ್ಯಗಳ ಹಂಚಿಕೆಯಲ್ಲಿ ಯಾವುದೇ ಲೋಪವಾಗದಂತೆ ನೂರರಷ್ಟು ಪ್ರಗತಿ ಸಾಧಿಸಬೇಕು ಮತ್ತು ವಿದೇಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು  ಪ್ರತಿ ಕಾಲೇಜುಗಳಿಗೆ ತೆರಳಿ ವಿದೇಶ ವಿದ್ಯಾಭ್ಯಾಸದ ಬಗ್ಗೆ ಪ್ರಚಾರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಹಾರ ಇಲಾಖೆ:

ಅಂಗನವಾಡಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ವಿತರಿಸಲಾಗುವ ಆಹಾರ ಮತ್ತು ಪೌಷ್ಟಿಕಾಂಶದ ಗುಣಮಟ್ಟದ ಆಹಾರ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನಿರಂತರ ನಿಗಾವಹಿಸಲು ಕ್ರಮವಿಸುವಂತೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ  ಮತ್ತು ರಸ್ತೆ ಸುರಕ್ಷತೆ:

ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಿ, ಅಪಘಾತ ವಲಯಗಳನ್ನು ಗುರುತಿಸಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆ  ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ಷರ ದಾಸೋಹ:

ಶಾಲೆಗಳಲ್ಲಿ ಮೊಟ್ಟೆ ನೀಡುತ್ತಿಲ್ಲವೆಂದು ದೂರುಗಳು ಬರುತ್ತಿವೆ ಈ ಬಗ್ಗೆ ವರದಿ ನೀಡುವಂತೆ ತಿಳಿಸಿದರ. ಶಾಲೆಗಳಲ್ಲಿ  ಮೊಟ್ಟೆ ನೀಡಲಾಗುತ್ತಿದೆ ಮೊಟ್ಟೆ ಬೇಡ ಎನ್ನುವರಿಗೆ ಲಿಖಿತ ಹೇಳಿಕೆ ಪಡೆದು 2 ಬಾಳೆ ಹಣ್ಣು ನೀಡಲಾಗುತ್ತಿದೆ ಎಂದು ಅಕ್ಷರ ದಾಸೋಹ ಅಧಿಕಾರಿಯವವರು ಸಭೆಗೆ ತಿಳಿಸಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶೇಖರ್‌ ಹೆಚ್.ಟಿ ಅವರು ಮಾತನಾಡಿ, ರಾಜ್ಯ ಸರ್ಕಾರದ ವತಿಯಿಂದ ಜಾರಿಗೆ ತರಲಾಗಿರುವ ‘ನಶೆಮುಕ್ತ ಕರ್ನಾಟಕ’  ಅಭಿಯಾನದ ಭಾಗವಾಗಿ ಕೆಎಸ್‌ಪಿ (KSP) ಆಪ್‌ನಲ್ಲಿ ವಿಶೇಷ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು ಅಥವಾ ವಿದ್ಯಾರ್ಥಿಗಳು ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಈ ಆಪ್ ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ದೂರು ನೀಡಬಹುದಾಗಿದ್ದು, ಇದನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದರು.
ಪೊಲೀಸರು ಮತ್ತು ಸಾರ್ವಜನಿಕರ, ವಿಶೇಷವಾಗಿ ಮಕ್ಕಳ ನಡುವಿನ ಅಂತರವನ್ನು ಕಡಿಮೆ ಮಾಡಲು ‘ತೆರೆದ ಮನೆ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಮಕ್ಕಳನ್ನು ಪೊಲೀಸ್ ಠಾಣೆಗಳಿಗೆ ಆಹ್ವಾನಿಸಿ, ಪೊಲೀಸರ ದೈನಂದಿನ ಕೆಲಸದ ಶೈಲಿಯನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯ ನಿವಾರಣೆಯಾಗುತ್ತಿದ್ದು, ಮಕ್ಕಳ ರಕ್ಷಣೆಗಾಗಿ ಇರುವ ‘ಪೋಕ್ಸೋ’ (POCSO) ಕಾಯ್ದೆಯ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.
ಯಾವುದೇ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದರೆ, ತಕ್ಷಣವೇ ‘ಹೊಯ್ಸಳ’ ಗಸ್ತು ವಾಹನಗಳು ಸ್ಥಳಕ್ಕೆ ಧಾವಿಸಲಿವೆ. ಸದ್ಯ ಪೊಲೀಸ್ ಇಲಾಖೆಯ ರಿಸ್ಪಾನ್ಸ್ ಟೈಮ್ (ಸ್ಪಂದನಾ ಅವಧಿ) ಕೇವಲ 10 ನಿಮಿಷಗಳು ಆಗಿದ್ದು, ಸಾರ್ವಜನಿಕರ ದೂರುಗಳಿಗೆ ಅತ್ಯಂತ ವೇಗವಾಗಿ ಸ್ಪಂದಿಸಲಾಗುತ್ತಿದೆ. ಸಂಘಟಿತ ಅಪರಾಧಗಳು, ಜೂಜಾಟ, ಮಟ್ಕಾ ಮತ್ತು ಅಕ್ರಮ ಮದ್ಯ ಮಾರಾಟದಂತಹ ಚಟುವಟಿಕೆಗಳ ವಿರುದ್ಧವೂ ಇಲಾಖೆ ಕಠಿಣ ಕ್ರಮಗಳನ್ನು ಮುಂದುವರಿಸಿದ್ದು, ಸಾರ್ವಜನಿಕರು ಯಾವುದೇ ಭಯವಿಲ್ಲದೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಸಂಸದರು ಮಾತನಾಡಿ  ಕೇಂದ್ರ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ‘ಅಲಿಮ್ಕೊ ಸಂಸ್ಥೆ, ಸಿ.ಆರ್.ಸಿ (CRC) ಕೇಂದ್ರ ಹಾಗೂ ಸಿ.ಜಿ ಆಸ್ಪತ್ರೆಯ ತಜ್ಞ ವೈದ್ಯರ ಸಹಯೋಗದೊಂದಿಗೆ ಈ ಹಿಂದೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗಾಗುವ ದೈಹಿಕ ದೋಷಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಿ ‘ಅಲಿಮ್ಕೊ  ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ‘ಅಲಿಮ್ಕೊ  ಕೇಂದ್ರದಿಂದ ಮಂಜೂರಾದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ವಿವಿಧ ಸಾಧನ ಸಲಕರಣೆಗಳನ್ನು  ಫಲಾನುಭವಿಗಳಿಗೆ ವಿತರಿಸಲಾಗಿದೃ. ಇದರಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳು, ಹಿರಿಯ ನಾಗರಿಕರಿಗೆ ಸೊಂಟದ ಬೆಲ್ಟ್, ಕತ್ತಿನ ಬೆಲ್ಟ್ ಹಾಗೂ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಅನುಕೂಲವಾಗುವಂತಹ ವಿಶೇಷ ‘ಮೊಬೈಲ್ ಕಮೋಡ್ ಚೇರ್’ಗಳನ್ನು ವಿತರಿಸಲಾಗಿದೆ.
ಈ ವಿಕಲಚೇತನರ ತಪಾಸಣೆ ಮತ್ತು ಸಲಕರಣೆ ವಿತರಣಾ ಶಿಬಿರವನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನುಳಿದ ಮೂರು ತಾಲೂಕುಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ನಿಷ್ಕಾಳಜಿ ಹಾಗೂ ನಿಯಮ ಉಲ್ಲಂಘನೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಇದೇ ವೇಳೆ, ಸಿ.ಜಿ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳ ಸ್ಥಿತಿಗತಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ  ಅನಗತ್ಯವಾಗಿ ಹೆರಿಗೆಯನ್ನು ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮಾಡುತ್ತಿರುವ ದೂರುಗಳು ಬರುತ್ತಿವೆ ,  ನೈಸರ್ಗಿಕ ಹೆರಿಗೆಯಾಗುವ ಸಾಧ್ಯತೆ ಇದ್ದರೂ ಸಿಸೇರಿಯನ್ ಮಾಡುತ್ತಿರುವ ಕೆಲವು ನರ್ಸಿಂಗ್ ಹೋಂಗಳಿಗೆ ಭೇಟಿ ಪರಿಶೀಲಿಸುವಂತೆ ಹಾಗೂ ಪ್ರತಿ ಆಸ್ಪತ್ರೆಯಲ್ಲಿ 24/7 ತುರ್ತು ಸೇವೆ ಲಭ್ಯವಿರಬೇಕು. ಗ್ರಾಮೀಣ ಭಾಗದ ರೋಗಿಗಳಿಗೆ ಅನುಕೂಲವಾಗುವಂತೆ ಆಂಬುಲೆನ್ಸ್ ನೆಟ್‌ವರ್ಕಿಂಗ್ ವ್ಯವಸ್ಥೆ ರೂಪಿಸಿ, ತುರ್ತು ಸಂಖ್ಯೆಯನ್ನು ಪ್ರಮುಖವಾಗಿ ಪ್ರದರ್ಶಿಸಬೇಕು. ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಈ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ ಕೆಲವು ನರ್ಸಿಂಗ್ ಹೋಂಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಮುಂಬರುವ ದಿನಗಳಲ್ಲಿ ಸುಧಾರಣೆ ಕಂಡುಬರದಿದ್ದರೆ ಕೆ.ಪಿ.ಎಂ.ಇ (KPME) ಕಾಯ್ದೆಯಡಿ ಲೈಸೆನ್ಸ್ ರದ್ದುಗೊಳಿಸಲು ಕ್ರಮವಹಿಸಲಾಗುವುದು ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳು ಸದ್ಬಳಕೆಯಾಗಬೇಕು. ಮುಂದಿನ ಸಭೆಯ ವೇಳೆಗೆ ಬಾಕಿ ಇರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ನಿಗದಿತ ಪ್ರಗತಿ ಸಾಧಿಸಿರಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೇ ಮಾಧವ ವಿಠ್ಠಲರಾವ್‌, ಅರಣ್ಯ ಉಪ ಸಂರಕ್ಷಣಾಧಿಕಾರಿ ಹರ್ಷವರ್ಧನ್‌ , ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Share

Leave a comment

Leave a Reply

Your email address will not be published. Required fields are marked *

Related Articles