SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ತುಂಗಾಭದ್ರಾ ನದಿಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿಯ ಶವ ಪತ್ತೆಯಾಗಿರುವ ಘಟನೆ ಹರಿಹರದಲ್ಲಿ ನಡೆದಿದೆ.
ಹರಿಹರ ತಾಲೂಕಿನ ಕೊಡಿಯಾಲ ಹೊಸಪೇಟೆಯ ನಗ್ಮಾ (24) ಅವರ ಪುತ್ರಿಯರಾದ ಆರು ವರ್ಷದ ಮನವೀತ, ಐದು ತಿಂಗಳ ಪಾವನಿ ಸಾವು ಕಂಡ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಇಬ್ಬರು ಮಕ್ಕಳನ್ನು ತುಂಗಾಭದ್ರಾ ನದಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ನಗ್ಮಾ ಅವರಿಗೆ ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗುತಿತ್ತು. ಆದರೂ ಗುಣಮುಖರಾಗಿರಲಿಲ್ಲ.
ಶನಿವಾರ ರಾತ್ರಿ ಮನೆಗೆ ಬಂದು ನೋಡಿದಾಗ ಪತ್ನಿ ನಗ್ಮಾ ಹಾಗೂ ಮಕ್ಕಳಾದ ಮನವೀತ ಹಾಗೂ ಐದು ತಿಂಗಳ ಪಾವನಿ ಇರಲಿಲ್ಲ. ಆಮೇಲೆ ಎಲ್ಲೆಡೆ ಹುಡುಕಾಟ ನಡೆಸಲಾಯಿತು. ಆದರೂ ಪತ್ತೆಯಾಗಿರಲಿಲ್ಲ ಎಂದು ಆಕೆಯ ಪತಿ ಅರುಣ್ ಕುಮಾರಪಟ್ಟಣಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತುಂಗಾಭದ್ರಾ ನದಿ ಕಡೆಗೆ ಹೋದಾಗ ವ್ಯಕ್ತಿಯೊಬ್ಬರು ಇದನ್ನು ಗಮನಿಸಿದ್ದು, ಮೂರು ಶವಗಳು ಪತ್ತೆಯಾಗಿವೆ.
ಆನಾರೋಗ್ಯ ಕಾರಣದ ಹಿನ್ನೆಲೆಯಲ್ಲಿ ತಾಯಿಯು ಮಕ್ಕಳನ್ನು ತುಂಗಾಭದ್ರಾ ನದಿಗೆ ತಳ್ಳಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹರಿಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.