SUDDIKSHANA KANNADA NEWS/ DAVANAGERE/ DATE:13-02-2024
ದಾವಣಗೆರೆ: ಮಧ್ಯಕರ್ನಾಟಕದ ಶಕ್ತಿ ದೇವತೆ ಶ್ರೀ ದುರ್ಗಾಂಬಿಕಾ ತಾಯಿ. ಈ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಮಾ.19 ಹಾಗೂ 20ಕ್ಕೆ ಅದ್ಧೂರಿಯಾಗಿ ಆಚರಣೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ನಿರ್ಧರಿಸಿ ಘೋಷಿಸಿದೆ.
ಜಾತ್ರೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕೆಲಸ ಶುರುವಾಗಿದೆ. ದುರ್ಗಾಂಬಿಕಾ ದೇವಸ್ಥಾನದಲ್ಲಿ ಹಂದರಗಂಬ ಪೂಜೆ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ದೊರೆತಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರೂ ಆದ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಬಾಪೂಜಿ ಟ್ರಸ್ಟ್ ನ ಆಜೀವ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಂದರಗಂಬ ಪೂಜೆ ನೆರವೇರಿಸಿದರು.
ಶಕ್ತಿ ದೇವತೆ ದುರ್ಗಾಂಬಿಕಾ ತಾಯಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಪ್ರಭಾ ಮಲ್ಲಿಕಾರ್ಜುನ್, ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಜಾತ್ರೆಯು ಯಶಸ್ವಿಯಾಗಿ ಯಾವುದೇ ನಿರ್ವಿಘ್ನವಿಲ್ಲದೇ ನಡೆಯುವಂತಾಗಲಿ, ಉತ್ತಮ ಮಳೆ ಬೆಳೆ ಆಗಲಿ, ಎಲ್ಲರಿಗೂ ಒಳಿತು ಮಾಡು ತಾಯಿ ಎಂದು ಪ್ರಾರ್ಥಿಸಿದರು.
ಇತಿಹಾಸ ಪ್ರಸಿದ್ಧ ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ. ಈ ಜಾತ್ರೆಗೆ ಲಕ್ಷಾಂತರ ಜನರು ಬರುತ್ತಾರೆ. ಬೇರೆ ಊರುಗಳು, ದೇಶದಲ್ಲಿದ್ದರೂ ಈ ಜಾತ್ರೆಗೆ ತಪ್ಪಿಸಿಕೊಳ್ಳುವುದಿಲ್ಲ. ತಾಯಿ ದುರ್ಗಾಂಬಿಕಾ ತಾಯಿ ಶಕ್ತಿಯೂ ಅಪಾರ. ಭಕ್ತರೂ ರಾಜ್ಯದ ಮೂಲೆ ಮೂಲೆಗಳಿಂದಲೂ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಜಾತ್ರೆಯ ವೈಭವೋಪೇತ, ವಿಜೃಂಭಣೆಯಿಂದ ನೆರವೇರುವ ಜೊತೆಗೆ ಭಕ್ತರ ಇಷ್ಟಾರ್ಥ ಸಿದ್ದಿಸುವ ತಾಯಿ ಅಂತಾನೇ ಪ್ರಸಿದ್ಧಿ. ಹಾಗಾಗಿ, ಈ ಜಾತ್ರೆಗೆ ಸಾಕಷ್ಟು ಮಹತ್ವದ ಜೊತೆ ಭಕ್ತರ ಪಾಲಿನ ಆರಾಧ್ಯ ತಾಯಿ.
ಹಂದರಗಂಬದ ಪೂಜೆ ನೆರವೇರಿಸುವ ಮೂಲಕ ಜಾತ್ರೆಯ ಸಿದ್ಧತೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗಿದೆ. ಶ್ರೀ ದುರ್ಗಾಂಬಿಕಾ ದೇವಸ್ಥಾನ ಸೇವಾಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಂದರಗಂಬ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು,ದುರ್ಗಾಂಬಿ ತಾಯಿಯ ಜಾತ್ರೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಈ ಜಾತ್ರಗೆ ಹಂದರಗಂಬ ಪೂಜೆ ನೆರವೇರಿಸಿ ಚಾಲನೆ ಕೊಡಲಾಗಿದೆ. ಜಾತ್ರೆಯು ಯಶಸ್ವಿಯಾಗಲು, ಸುಗಮ ಹಾಗೂ ಯಾವುದೇ ತೊಂದರೆ ಇಲ್ಲದೇ ನಡೆಯುವಂತಾಗಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಮನೂರು ಶಿವಶಂಕರಪ್ಪ ಮಾತನಾಡಿ, ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಾ. 19 ಮತ್ತು 20 ರಂದು ನಡೆಯಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಕುಸ್ತಿ, ಕುರಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನ ಆಡಳಿತ ಮಂಡಳಿಯ ಗೌಡ್ರ ಚನ್ನಬಸಪ್ಪ, ಮಹಾನಗರ ಪಾಲಿಕೆಯ ಮೇಯರ್ ಬಿ. ಎಚ್. ವಿನಾಯಕ ಪೈಲ್ವಾನ್, ಎಚ್.ಬಿ. ಗೋಣೆಪ್ಪ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಾಲತೇಶ್ ಜಾಝವ್, ಉಮೇಶ್ ಸಾಳಂಕಿ, ಬಾಬುರಾವ್ ಸಾಳಂಕಿ ಮತ್ತಿತರರು ಹಾಜರಿದ್ದರು.