Home ಕ್ರೈಂ ನ್ಯೂಸ್ ಮೋಹನ್ ಭಾಗವತ್‌ಗೆ ಕೆನಡಾ ಪ್ರವೇಶ ನೀಡಬೇಡಿ ಎಂದ ಎನ್‌ಡಿಪಿ ಸಂಸದರು: ಸಾಕ್ಷ್ಯಾಧಾರವಿಲ್ಲದೆ ನಿರ್ಬಂಧಿಸಬೇಡಿ ಎಂದ ಹಿಂದೂ ಸಂಘಟನೆಗಳು
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮೋಹನ್ ಭಾಗವತ್‌ಗೆ ಕೆನಡಾ ಪ್ರವೇಶ ನೀಡಬೇಡಿ ಎಂದ ಎನ್‌ಡಿಪಿ ಸಂಸದರು: ಸಾಕ್ಷ್ಯಾಧಾರವಿಲ್ಲದೆ ನಿರ್ಬಂಧಿಸಬೇಡಿ ಎಂದ ಹಿಂದೂ ಸಂಘಟನೆಗಳು

Share
ಮೋಹನ್ ಭಾಗವತ್‌
Share

ಒಟಾವಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೆನಡಾ ಪ್ರವಾಸಕ್ಕೆ ಸಂಬಂಧಿಸಿದಂತೆ ರಾಜಕೀಯ ವಾಗ್ದಾಳಿ ತೀವ್ರಗೊಂಡಿದೆ. ಭಾಗವತ್ ಅವರ ಭೇಟಿಯನ್ನು ತಡೆಯಬೇಕು ಮತ್ತು ಅವರಿಗೆ ಕೆನಡಾ ಪ್ರವೇಶ ನಿಷೇಧಿಸಬೇಕು ಎಂದು ಕೆನಡಾದ ಕೆಲವು ಸಂಸದರು ಒತ್ತಾಯಿಸುತ್ತಿರುವ ಬೆನ್ನಲ್ಲೇ, 100ಕ್ಕೂ ಹೆಚ್ಚು ಕೆನಡಿಯನ್ ಹಿಂದೂ ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳು ಮೋಹನ್ ಭಾಗವತ್ ಅವರಿಗೆ ಬೆಂಬಲವಾಗಿ ನಿಂತಿವೆ.

ಈ ಕುರಿತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರೀ, ವಲಸೆ ಸಚಿವೆ ಲೀನಾ ಮೆಟ್ಲೆಜ್ ದಿಯಾಬ್ ಹಾಗೂ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರಿಗೆ ಸಂಘಟನೆಗಳು ಜಂಟಿ ಪತ್ರ ಬರೆದಿವೆ. ಭಾಗವತ್ ಅವರ ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ರಾಜಕೀಯ ಒತ್ತಡಗಳಿಗೆ ಮಣಿಯದೆ, ಕಾನೂನು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೈಗೊಳ್ಳಬೇಕೆಂದು ಈ ಪತ್ರದಲ್ಲಿ ಆಗ್ರಹಿಸಲಾಗಿದೆ.

ಸಂಸದರ ವಿರೋಧಕ್ಕೆ ಸಂಘಟನೆಗಳ ತಿರುಗೇಟು:

ಕೆನಡಾದ ಎನ್‌ಡಿಪಿ ಪಕ್ಷದ ಸಂಸದರಾದ ಜೆನ್ನಿ ಕ್ವಾನ್ ಮತ್ತು ಹೀಥರ್ ಮೆಕ್‌ಫರ್ಸನ್ ಸೇರಿದಂತೆ ಕೆಲವು ನಾಯಕರು ಮೋಹನ್ ಭಾಗವತ್ ಕೆನಡಾಗೆ ಪ್ರವೇಶಿಸದಂತೆ ತಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಈ ಆರೋಪಗಳನ್ನು ಆಧಾರರಹಿತ ಎಂದು ಬಣ್ಣಿಸಿರುವ ಹಿಂದೂ ಸಂಘಟನೆಗಳು, “ಗಂಭೀರ ಆರೋಪಗಳನ್ನು ಮಾಡಲು ನಿಖರ ಮತ್ತು ಸ್ವತಂತ್ರವಾದ ಸಾಕ್ಷ್ಯಾಧಾರಗಳಿರಬೇಕು. ಕೇವಲ ರಾಜಕೀಯ ಹೆಣೆದ ಕಥೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಾರದು” ಎಂದು ಪತ್ರದಲ್ಲಿ ಸ್ಪಷ್ಟಪಡಿಸಿವೆ.

ಮೋಹನ್ ಭಾಗವತ್ ಅವರ ಭೇಟಿಯು ಕೆನಡಾದಲ್ಲಿರುವ 10 ಲಕ್ಷಕ್ಕೂ ಹೆಚ್ಚು ಹಿಂದೂ ಸಮುದಾಯಕ್ಕೆ ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿದೆ ಎಂದು ಸಂಘಟನೆಗಳು ತಿಳಿಸಿವೆ. ಕೆನಡಾ-ಇಂಡಿಯಾ ಫೌಂಡೇಶನ್, ಕೆನಡಿಯನ್ ಆರ್ಯ ಸಮಾಜ, ಕೆನಡಾ ಹಿಂದೂ ಸಭಾ ಟೆಂಪಲ್, ಹಿಂದೂ ಸ್ವಯಂಸೇವಕ ಸಂಘ ಹಾಗೂ ವಿಎಚ್‌ಪಿ ಕೆನಡಾ ಸೇರಿದಂತೆ 100ಕ್ಕೂ ಹೆಚ್ಚು ಪ್ರಮುಖ ಸಂಸ್ಥೆಗಳು ಈ ಮನವಿಗೆ ಸಹಿ ಹಾಕಿವೆ.

ಯಾವುದೇ ಧರ್ಮದ ಪ್ರಮುಖ ಮುಖಂಡರಿಗೆ ಸಾಕ್ಷ್ಯಾಧಾರವಿಲ್ಲದೆ ಪ್ರವೇಶ ನಿಷೇಧಿಸುವುದು ಕೆನಡಾದ ಜಾತ್ಯತೀತತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳಿಗೆ ಧಕ್ಕೆ ತರುತ್ತದೆ ಎಂದು ಸಂಘಟನೆಗಳು ಪ್ರಧಾನಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಎಚ್ಚರಿಸಿವೆ.

Share

Leave a comment

Leave a Reply

Your email address will not be published. Required fields are marked *

Related Articles