SUDDIKSHANA KANNADA NEWS/ DAVANAGERE/ DATE:25-09-2024
ದಾವಣಗೆರೆ: ಬಿಜೆಪಿ ಮಾಜಿ ಶಾಸಕರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಶಾಸಕ ಜನಾರ್ದನ ರೆಡ್ಡಿ, ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಯಾಕೆ ನೀಡಿಲ್ಲ. ಲೋಕಾಯುಕ್ತರು ತನಿಖೆ ನಡೆಸಿ ವರದಿ ನೀಡಿದ್ದರೂ ಯಾಕೆ ತನಿಖೆ ನಡೆಸಿಲ್ಲ, ಬಂಧಿಸಿಲ್ಲ. ಇದನ್ನು ನೋಡಿದರೆ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಜವಾಹಾರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಆರೋಪಿಸಿದ್ದಾರೆ.
ಹೆಚ್. ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 150 ಕೋಟಿ ರೂಪಾಯಿ ಗಣಿ ಲಂಚ ಪಡೆದಿದ್ದ ಆರೋಪ ಬಂದಿತ್ತು. ಮಾತ್ರವಲ್ಲ, ಇನ್ನೂ ಹಲವು ಆರೋಪಗಳಿವೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಿಜೆಪಿಯಲ್ಲಿ ಸಿಎಂ ಆಗಲು 2500 ಕೋಟಿ ರೂಪಾಯಿ ನೀಡಬೇಕು ಎಂದಿದ್ದರು. ಸಚಿವರಾಗಲು ನೂರಾರು ಕೋಟಿ ರೂಪಾಯಿ ಕೊಡಬೇಕೆಂದು ಬಹಿರಂಗ ಹೇಳಿಕೆ ನೀಡಿದ್ದರು. ಆದ್ರೂ ಕ್ರಮ ಆಗಲಿಲ್ಲ. ಕೋವಿಡ್ ಹಗರಣದಲ್ಲಿ ಕೆ. ಸುಧಾಕರ್ ವಿರುದ್ಧ ತನಿಖೆ ನಡೆಸಿಲ್ಲ. ಅದೇ ರೀತಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಭ್ರಷ್ಟ ಎಂದು ಅವರದ್ದೇ ಪಕ್ಷದ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯರ ಇಮೇಜ್, ಜನಪ್ರಿಯತೆ ಸಹಿಸಲಾಗದೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವರು ನಡೆಸಿರುವ ಷಡ್ಯಂತ್ರ. ತನಿಖೆ ಎದುರಿಸುವುದಾಗಿ ಸಿದ್ದರಾಮಯ್ಯರು ಹೇಳಿದ್ದಾರೆ. ಸಿಎಂ ಆಗಿದ್ದಾಗ ಬಿ. ಎಸ್. ಯಡಿಯೂರಪ್ಪ ಜೈಲಿಗೆ ಹೋಗಿಬಂದಿದ್ದರು. ಬಿಜೆಪಿ ನಾಯಕರು ಯಾಕೆ ಆಗ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ಶೇಕಡಾ 40ರಷ್ಟು ಕಮೀಷನ್ ಸರ್ಕಾರ ಎಂಬ ಆರೋಪ ಬಂದಿತ್ತು. ಆದರೂ ಯಾವುದೇ ತನಿಖೆ ನಡೆಸಿಲ್ಲ. ಸಿದ್ದರಾಮಯ್ಯರ ವಿರುದ್ಧ ಖಾಸಗಿ ದೂರುದಾರರು ರಾಜ್ಯಪಾಲರಿಗೆ ದೂರು ಕೊಟ್ಟಾಕ್ಷಣ ಪ್ರಾಸಿಕ್ಯೂಷನ್ ಗೆ ನೀಡಿದ್ದಾರೆ. ವರ್ಷಗಳೇ ಕಳೆದರೂ ಬಿಜೆಪಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರ ವಿರುದ್ಧ ಯಾಕೆ ತನಿಖೆ ನಡೆಸಲಾಗಲಿಲ್ಲ. ಶಿಕ್ಷೆ ವಿಧಿಸಲಿಲ್ಲ ಎಂದು ಹೇಳಿದ್ದಾರೆ.