SUDDIKSHANA KANNADA NEWS/ DAVANAGERE/ DATE:10-06-2024
ದಾವಣಗೆರೆ: ನನಗೆ ಮಾಡಾಳ್ ಮಲ್ಲಿಕಾರ್ಜುನ್ ಫೋನ್ ಮಾಡಿ ನೋಡ್ಕೋಳ್ತೇನೆ, ಹುಚ್ಚು ಬಿಡಿಸ್ತೀನಿ ಅಂತಾನೆ. ಡೆಲ್ಲಿ ಬಾಯ್ಸ್ ಅಂಡ್ ಟೀಂ ಅನ್ನು ಯಾವ ಮುಖವಿಟ್ಟುಕೊಂಡು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಬಿಟ್ಟುಕೊಂಡಿದ್ದಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಬೆಂಕಿಯುಗುಳಿದ್ದಾರೆ.
ನಗರದ ಹರಿಹರ ಅರ್ಬನ್ ಸಮುದಾಯ ಭವನದಲ್ಲಿ ಮತದಾರರು, ಕಾರ್ಯಕರ್ತರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಲು ಆಗುತ್ತೆ? ಪ್ರಾಮಾಣಿಕ ಕಾರ್ಯಕರ್ತರು ಏನು ಮಾಡಲು ಸಾಧ್ಯ ಎಂಬುದನ್ನ ತಿಳಿದುಕೊಳ್ಳಿ. ಸಿದ್ದೇಶ್ವರ ಅವರು ಏನು ಹೇಳುತ್ತಾರೆ ಏನೋ. ಆದ್ರೆ, ಸಿದ್ದೇಶ್ವರ ಅವರು ಹೇಳಿದರೂ ಕೇಳಲ್ಲ. ನಾನು ಹೇಳೋನೇ. ಇದು ಸತ್ಯ. ನನಗೆ ಸಿದ್ದೇಶ್ವರ ಅವರಾಗಲೀ, ಗಾಯಿತ್ರಿ ಸಿದ್ದೇಶ್ವರ ಅವರಾಗಲೀ ಪ್ರಶ್ನೆ ಅಲ್ಲ. ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಆಗಲಿಲ್ಲ ಎಂಬ ನೋವಿದೆ ಎಂದು ಹೇಳಿದರು.
ಮಾಡಾಳ್ ಮಲ್ಲಿಕಾರ್ಜುನ್ ಫೋನ್ ಮಾಡಿ ನನಗೆ ನೋಡ್ಕೋಳ್ತಾನಂತೆ, ಹುಚ್ಚು ಬಿಡಿಸ್ತಾನಂತೆ. ಕಾರ್ಯಕರ್ತರಿಗೆ ಗೊತ್ತಿರಲಿ. ಕಳೆದ ಅವಧಿಯಲ್ಲಿ ಅನೇಕ ಹಗರಣ ಮಾಡಿದಂಥ ಹಲವಾರು ಶಾಸಕರು, ಸಚಿವರಲ್ಲಿ ಅವರ ತಂದೆ ಮಾಡಾಳ್ ವಿರೂಪಾಕ್ಷಪ್ಪ ಕೂಡ ಒಬ್ಬರು. ನಮ್ಮ ಭಾರತೀಯ ಜನತಾ ಪಕ್ಷ 66 ಸ್ಥಾನ ಬರಲು ಮಾಡಾಳ್ ವಿರೂಪಾಕ್ಷಪ್ಪ ಮಾಡಿದ ಭ್ರಷ್ಟಾಚಾರವೂ ಒಂದು ಕಾರಣ. ನನ್ನನ್ನು ನೋಡಿಕೊಳ್ಳುತ್ತಾನಂತೆ, ಹುಚ್ಚು ಬಿಡಿಸ್ತಾನಂತೆ. ಇವೆಲ್ಲಾ ನನ್ನ ಬಳಿ ನಡೆಯೋದಿಲ್ಲ ಎಂದು ಗುಡುಗಿದರು.
ಮೋದಿ ಅವರನ್ನು ಪ್ರಧಾನಿ ಮಾಡಲು ಹೋರಾಡಿದವರು ನಾವೆಲ್ಲರೂ ಇಲ್ಲಿದ್ದೇವೆ. ಮೋದಿ ಅವರನ್ನು ಸೋಲಿಸಿದವರು ದೆಹಲಿಗೆ ಹೋಗಿದ್ದಾರೆ. ಡೆಲ್ಲಿ ಬಾಯ್ಸ್ ಟೀಂ ಯಾವ ಮುಖ ಇಟ್ಟುಕೊಂಡು ಹೋಗಿದ್ದಾರೆ. ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ದೆಹಲಿಯಲ್ಲಿ ಮನೆಗೆ ಬಿ. ಎಸ್. ಯಡಿಯೂರಪ್ಪ, ವಿಜಯೇಂದ್ರ ಬಿಟ್ಟುಕೊಂಡಿದ್ದಾರೆ. ಹೋಗಿರುವ ಅವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.
ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ವ್ಯವಸ್ಥಿತ ಪಿತೂರಿ ಕಾರಣ. ಬಿಜೆಪಿ ಕೈ ತಪ್ಪಲು ರಾಜ್ಯದ ಕೆಲ ನಾಯಕರು ಮತ್ತು ಭ್ರಷ್ಟರೇ ಕಾರಣ. ಕಾರ್ಯಕರ್ತರು ಯೋಚನೆ ಮಾಡಲೇಬೇಕಿದೆ. ಯಾರಾದರೂ ಒಬ್ಬರು ಸತ್ಯವನ್ನು ಹೇಳಬೇಕು. ಆ ಕೆಲಸ ನಾನು ಮಾಡಿದ್ದೀನಿ. ನಾನು ಮಾಡಿದ್ದೇ ಸರಿ ಎಂದು ಹೈಕಮಾಂಡ್ ಗೆ ಬ್ವಾಕ್ ಮೇಲ್ ಮಾಡುವ ಮೂಲಕ ದುಷ್ಟಶಕ್ತಿಗಳು ವಿಜೃಂಭಿಸುತ್ತಿವೆ ಎಂದು ಬಿ. ಪಿ. ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.
ಬಂಡವಾಳ ಶಾಹಿಗಳು, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಳ್ಳುತ್ತೀರಾ. ಇವೆಲ್ಲಾ ನಡೆಯುವುದಿಲ್ಲ. ನಾವು ಧರ್ಮದ ಹಾದಿಯಲ್ಲಿ ನಡೆಯುವವರು. ಹಾಗಾಗಿ, ನಮ್ಮ ದಾರಿ ಸರಿ ಇರುತ್ತದೆ ಎಂದು ಕೆಂಡಮಂಡಲರಾದರು.
ವೇದಿಕೆಯಲ್ಲಿ ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ, ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಹೆಚ್. ಪಿ. ರಾಜೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ, ದೇವರಮನಿ ಶಿವಕುಮಾರ್, ಜಿ. ಎಸ್. ಅಶ್ವಿನಿ, ಜಿ. ಎಸ್. ಶ್ಯಾಮ್, ಜಗದೀಶ್, ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು.