ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಮನುಷ್ಯ ಕುಲವೇ ಮರುಗುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಿದ್ದ ಮನೆಯೊಳಗೆ 34 ವರ್ಷದ ಪ್ರಿಯಾಂಕಾ ಎಂಬಾಕೆಯ ಅಸ್ಥಿಪಂಜರ ಪತ್ತೆಯಾಗಿದೆ. ತನ್ನ ಮಗಳ ಸಾವಿನ ವಿಷಯವನ್ನು ಯಾರಿಗೂ ತಿಳಿಸದ ತಂದೆ ಉದಯ್ ಭಾನ್ ಬಿಸ್ವಾಸ್, ಶವದ ದುರ್ವಾಸನೆ ಬರದಂತೆ ಮನೆಯೊಳಗೆ ಸುಗಂಧ ದ್ರವ್ಯ (Perfume) ಸಿಂಪಡಿಸಿ ರಹಸ್ಯವಾಗಿಟ್ಟಿದ್ದ ಸಂಗತಿ ಬಯಲಾಗಿದೆ.
ನಡೆದಿದ್ದೇನು?
ಕಳೆದ ನಾಲ್ಕು ತಿಂಗಳಿನಿಂದ ಉದಯ್ ಭಾನ್ ಮತ್ತು ಆತನ ಮಗಳು ಪ್ರಿಯಾಂಕಾ ನೆರೆಹೊರೆಯವರಿಗೆ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬೀಗ ಹಾಕಿದ್ದರಿಂದ ಎಲ್ಲರೂ ಅವರು ಊರಿಗೆ ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ, ಅನುಮಾನಗೊಂಡ ಸಂಬಂಧಿಕರು ಉದಯ್ ಭಾನ್‌ನನ್ನು ಬೇಗಂ ಬಾಗ್‌ನ ಟೀ ಅಂಗಡಿಯೊಂದರ ಬಳಿ ಪತ್ತೆ ಹಚ್ಚಿದಾಗ ಈ ಭೀಕರ ಸತ್ಯ ಹೊರಬಿದ್ದಿದೆ.
ಮೊದಲು ಮಗಳು ಡೆಹ್ರಾಡೂನ್ ಆಸ್ಪತ್ರೆಯಲ್ಲಿದ್ದಾಳೆ ಎಂದು ಸುಳ್ಳು ಹೇಳಿದ್ದ ತಂದೆ, ನಂತರ ಸಂಬಂಧಿಕರ ತೀವ್ರ ವಿಚಾರಣೆಗೆ ಹೆದರಿ ಮಗಳು ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದ್ದಾನೆ. ತಕ್ಷಣ ಪೊಲೀಸರು ಮನೆಗೆ ತೆರಳಿ ಬೀಗ ಒಡೆದು ನೋಡಿದಾಗ, ಹಳೆಯ ಕಾಗದ ಪತ್ರಗಳು ಮತ್ತು ಗುಜರಿ ವಸ್ತುಗಳ ನಡುವೆ ಪ್ರಿಯಾಂಕಾಳ ಅಸ್ಥಿಪಂಜರ ಪತ್ತೆಯಾಗಿದೆ.
ವಾಸನೆ ಬರದಂತೆ ತಂದೆಯ ಸಂಚು:
ಮಗಳು ಮೃತಪಟ್ಟ ನಂತರ ಸುಮಾರು 3-4 ದಿನಗಳ ಕಾಲ ತಂದೆ ಆ ಶವದೊಂದಿಗೇ ವಾಸವಿದ್ದ ಎಂದು ಹೇಳಲಾಗಿದೆ. ಶವ ಕೊಳೆಯುವ ವಾಸನೆ ಹೊರಗೆ ಬರದಂತೆ ತಡೆಯಲು ಮನೆಯ ತುಂಬಾ ಸುಗಂಧ ದ್ರವ್ಯಗಳನ್ನು ಸಿಂಪಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2013ರ ದುರಂತದ ನಂಟು:
ಸಂಬಂಧಿಕರ ಪ್ರಕಾರ, ಪ್ರಿಯಾಂಕಾ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ವಿಪರ್ಯಾಸವೆಂದರೆ, 2013ರಲ್ಲಿ ಪ್ರಿಯಾಂಕಾಳ ತಾಯಿ ಕೂಡ ಇದೇ ರೀತಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅಂದಿನಿಂದ ತಂದೆ ಮತ್ತು ಮಗಳು ಇಬ್ಬರೂ ತೀವ್ರ ಖಿನ್ನತೆ ಮತ್ತು ಒಂಟಿತನಕ್ಕೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಸ್ತುತ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.





Leave a comment