SUDDIKSHANA KANNADA NEWS/ DAVANAGERE/ DATE:25-12-2024
ಬೆಳಗಾವಿ: ಪೊಲೀಸರು ಮೀಡಿಯಾದವ್ರು, ನಮ್ಮನ್ನು ಹಾಗೂ ಸರ್ಕಾರವನ್ನು ಕೇಳಿ ಕೆಲಸ ಮಾಡುತ್ತಾರಾ? ನಾವು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ನಿಯಮದಂತೆ ಕೆಲಸ ಮಾಡುತ್ತಾರೆ. ಐಜಿಪಿಯವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವೇನೂ ಇಲ್ಲಿ ವಿಚಾರಣೆ ಮಾಡಲು ಬಂದಿದ್ದೀರಾ. ತಡೀರಿ.. ಹೇಳೋದನ್ನು ಕೇಳ್ರಿ. ನೀವು ತನಿಖೆ ಮಾಡಲು ಬರಬೇಡಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಆಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇವೆ. ಸಿ. ಟಿ. ರವಿ ಬಂಧನಕ್ಕೆ ಸಂಬಂಧಿಸಿದಂತೆ ಹಾಗೂ ರಾತ್ರಿಯಿಡಿ ಕಾರಿನಲ್ಲಿ ಸುತ್ತಾಡಿಸಿದ ಖಾನಾಪುರ ಸಿಪಿಐ ಸಸ್ಪೆಂಡ್ ವಿಚಾರ ಸಂಬಂಧ ಐಜಿಪಿಯವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಸಿ. ಟಿ. ರವಿ ವಿರುದ್ಧ ದಾಳಿ ಮಾಡಲು ಬಂದಿದ್ದ24 ಮಂದಿಯನ್ನು ಬಂಧಿಸಿದ್ದೆವು. ಬಳಿಕ ಅವರು ಜಾಮೀನು ಪಡೆದು ಹೋಗಿದ್ದಾರೆ. ಪೊಲೀಸರ ತನಿಖೆ, ಕೆಲಸದಲ್ಲಿ ನಾವು ಹಸ್ತಕ್ಷೇಪ ಮಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನ ನೂರು ವರ್ಷಗಳನ್ನು ಪೂರೈಸುತ್ತಿದೆ. ಅದರಂತೆ ಡಿಸೆಂಬರ್ 26 ಹಾಗೂ 27 ರಂದು ಈ ಅಧಿವೇಶನದ ಶತಮಾನೋತ್ಸವ
ಕಾರ್ಯಕ್ರಮವನ್ನು “ಗಾಂಧಿ ಭಾರತ” ಎನ್ನುವ ಹೆಸರಿನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಡಿ. ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಕಾರ್ಯಕ್ರಮದ ರೂಪುರೇಷೆ, ವಿಐಪಿಗಳು, ಗಣ್ಯಾತಿಗಣ್ಯರು ಆಗಮಿಸಲಿದ್ದು, ಮಾಹಿತಿ ಪಡೆಯಬೇಕಿತ್ತು. ಹಾಗಾಗಿ ಡಿ. ಕೆ. ಶಿವಕುಮಾರ್ ಬಂದಿದ್ದರು. ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಆದ್ರೆ, ಸಿ. ಟಿ. ರವಿ ಬಂಧನ, ಖಾನಾಪುರ ಸಿಪಿಐ ಸಸ್ಪೆಂಡ್ ಬಗ್ಗೆ ಐಜಿಪಿಯವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.