SUDDIKSHANA KANNADA NEWS/ DAVANAGERE/ DATE:12-09-2023
ದಾವಣಗೆರೆ: ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಮೆಕ್ಕೆಜೋಳ, ರಾಗಿ, ಜೋಳದ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದಾರೆ. ಮಾಯಕೊಂಡ (Mayakonda) ಕ್ಷೇತ್ರವನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿ, ರೈತರಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಈ ಸುದ್ದಿಯನ್ನೂ ಓದಿ:
M. P. Renukacharya:ಎಲ್ಲರನ್ನೂ ಉಚ್ಚಾಟನೆ ಮಾಡ್ಲಿ, ನಾಲ್ಕೇ ಜನ ಬಿಜೆಪಿಯಲ್ಲಿರಲಿ – ಯಾರಿಗೂ ಜಗ್ಗಲ್ಲ, ಬಗ್ಗಲ್ಲ: ಜಿಲ್ಲಾ ಬಿಜೆಪಿಗೆ ಸೆಡ್ಡು ಹೊಡೆದ ಎಂ. ಪಿ. ರೇಣುಕಾಚಾರ್ಯ
ತಾಲೂಕಿನ ಕಂದಗಲ್ಲು ಗ್ರಾಮದಲ್ಲಿ ಮಂಗಳವಾರ ನಿಜಗುಣ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲೂಕಿನಲ್ಲಿ ಅರ್ಧ ನೀರಾವರಿ ಪ್ರದೇಶ, ಇನ್ನರ್ಧ ಒಣ ಭೂಮಿ ಪ್ರದೇಶ ಹೊಂದಿರುವುದರಿಂದ ಬರಪೀಡಿತ ತಾಲೂಕು ಘೋಷಣೆಗೆ ತೊಡಗಿದೆ. ಹೀಗಾಗಿ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಒಣ ಭೂಮಿ ಹೊಂದಿರುವ ಹೋಬಳಿಗಳನ್ನು ಬರಪೀಡಿತ ಪ್ರದೇಶ ಎಂದುಘೋಷಿಸಲು ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿದ್ದೇನೆ. ಅಲ್ಲದೇ ನಿರಂತರ ಅವರ ಮೇಲೆ ಒತ್ತಡ ಹಾಕುವ ಮೂಲಕ ಬರಗಾಲದಿಂದ ತತ್ತರಿಸಿರುವ ರೈತರ ಬೆನ್ನಿಗೆ ಸದಾ ನಿಲ್ಲುವುದಾಗಿ ಭರವಸೆ ನೀಡಿದರು.
ಹಡಪದ ಅಪ್ಪಣ್ಣ ಸಮಾಜ ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹೊಂದಿರುವ ಸಮಾಜ. ಈ ಸಮಾಜ ತೀವ್ರ ಹಿಂದುಳಿದ ಸಮಾಜವಾಗಿದೆ. ಈ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಸಾಧ್ಯ ಎಂದರು.
ಅತೀ ಹಿಂದುಳಿದಿರುವ ಮಡಿವಾಳ ಮತ್ತು ಹಡಪದ ಅಪ್ಪಣ ಸಮಾಜಗಳಿಗೆ ಮೀಸಲಾತಿ ಸಿಕ್ಕು, ಈ ಎರಡು ಸಮಾಜಗಳು ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಹಡಪದ ಸಮಾಜಕ್ಕೆ ಒಂದು ಸಮುದಾಯ ಭವನ ನಿರ್ಮಿಸಿ ಕೊಡುವುದಾಗಿ ತಿಳಿಸಿದ ಅವರು, ಕ್ಷೇತ್ರದ ಜನರ ಏನೇ ಸಮಸ್ಯೆಗಳು, ಕುಂದುಕೊರತೆ ಇದ್ದು, ಅವುಗಳನ್ನು ನನ್ನ ಗಮನಕ್ಕೆ ತಂದರೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಜಿಪಂ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಕೆ.ಎಸ್.ಬಸವಂತಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದಕ್ಕಿಂತ ಅವರಿಗೆ ಕಾಲವಕಾಶ
ಕೊಡಬೇಕು. ಏಕೆಂದರೆ ಶಾಸಕರು ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಯಾಗಿರುವುದರಿಂದ ಮಾಯಕೊಂಡ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂಬ ಭರವಸೆ ನನಗಿದೆ ಎಂದರು.
ಬಿಜಾಪುರ ಜಿಲ್ಲೆಯ ತಂಗಡಗಿ ಸುಕ್ಷೇತ್ರದ ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ್ರು, ಕೆ.ಸಿ. ಮಂಜುನಾಥ್, ಬಸಣ್ಣ, ಶಶಿಧರ್, ಕೋಟೆಪ್ಪ, ಚಂದ್ರಪ್ಪ, ಪರಮೇಶ್ವರಪ್ಪ, ಮೈಲಾರ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಎಚ್.ನಾಗರಾಜ್ ಸೇರಿದಂತೆ ಇನ್ನಿತರರಿದ್ದರು.