SUDDIKSHANA KANNADA NEWS/ DAVANAGERE/ DATE:20-10-2024
ದಾವಣಗೆರೆ: ಒಳ ಮೀಸಲಾತಿ ಜಾರಿಗೆ ಬರುವವರೆಗೂ ಹೋರಾಟ ನಿಲ್ಲಿಸುವ ಮಾತೇ ಇಲ್ಲ. ಒಳ ಮೀಸಲಾತಿ ಜಾರಿಗೊಳಿಸಲೇಬೇಕು ಎಂದು ಒತ್ತಾಯಿಸಿರುವ ಜಿಲ್ಲಾ ಮಾದಿಗ ಛಲವಾದಿ ಸಮುದಾಯಗಳ ಒಕ್ಕೂಟವು ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಅಕ್ಟೋಬರ್ 23ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ರವಿನಾರಾಯಣ್ ಅವರು ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಳ್ಳಲಿದೆ ಎಂದು ಹೇಳಿದರು.
ಮೆರವಣಿಗೆಯು ಜಯದೇವ ವೃತ್ತ, ಅಶೋಕ ರಸ್ತೆ, ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ನಡೆಯಲಿದ್ದು, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಳೆದ ಮೂರು ದಶಕಗಳಿಂದ ಮಾದಿಗ ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು ಎಂಬ ನಿರಂತರ ಹೋರಾಟದ ಫಲವಾಗಿ ಈಗ ಒಳಮೀಸಲಾತಿ ಜಾರಿಗೆ ಬರುವ ಸಮಯ ಬಂದಿದ್ದು, ಸರ್ವೋಚ್ಚ ನ್ಯಾಯಾಲಯವು ಅ. 1 ರಂದು ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರ ಗಳಿಗೆ ಇದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಅದರ ಅನ್ವಯ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ರುದ್ರಮುನಿ ಮಾತನಾಡಿ, ಒಳ ಮೀಸಲಾತಿ ನೀಡದೇ ಇರುವುದರಿಂದ ಅನೇಕ ಸಮುದಾಯಗಳಿಗೆ ಅನ್ಯಾಯ ಆಗುತ್ತಿದೆ. ತುಟಿ ಮೇಲಿನ ಅನುಕಂಪ ಬೇಕಾಗಿಲ್ಲ. ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನಂತೆ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೆ ರಾಜ್ಯದಲ್ಲಿ ನಡೆಯುವ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕು. ಹಣಕಾಸಿನ ಮತ್ತು ಇತರೆ ಸೌಲಭ್ಯಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರದಲ್ಲಿ ಇರುವ ಲಭ್ಯವಿರುವ ದತ್ತಾಂಶಗಳ ಆಧಾರದಲ್ಲಿ ಒಳ ಮೀಸಲಾತಿ ನೀಡುವುದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ. ಆದರೂ, ಸರ್ಕಾರ ಮೀನಾಮೇಷ ಎಣಿಸುತ್ತಿರುವುದನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಈಗ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಒಳಗೊಂಡಂತೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಮಹಾನಗರ ಪಾಲಿಕೆಯ ಆಶ್ರಯ ಸಮಿತಿ ಸದಸ್ಯ ಆಂಜಿನಪ್ಪ, ಬಿ.ಎಸ್. ಪುರುಷೋತ್ತಮ್, ಎಚ್. ಮಲ್ಲೇಶ್, ಬಿ.ಎಚ್. ಉದಯ್ ಕುಮಾರ್, ಎಂ. ಹಾಲೇಶ್, ಎಲ್.ಎಚ್. ಸಾಗರ್, ಆಲೂರು ನಿಂಗರಾಜ್, ಬಿ.ಎಂ. ನಿರಂಜನ್, ಹೆಗ್ಗೆರೆ ರಂಗಪ್ಪ, ಕೆ.ಎಸ್. ಗೋವಿಂದರಾಜ್, ಎಸ್. ಮಲ್ಲಿಕಾರ್ಜುನ್, ಎಚ್.ಕೆ. ಬಸವರಾಜ್, ಕೆ. ಏಕಾಂತಪ್ಪ, ಕುಂದುವಾಡ ಮಂಜುನಾಥ್, ನಾಗಭೂಷಣ್, ಓಂಕಾರಪ್ಪ, ಸೋಮಲಾಪುರ ಹನುಮಂತಪ್ಪ, ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.