SUDDIKSHANA KANNADA NEWS/ DAVANAGERE/ DATE:04-12-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿಯೂ ಎರಡು ಬಣಗಳ ನಡುವಿನ ಕಿತ್ತಾಟ ಜೋರಾಗಿದೆ. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ ನೇತೃತ್ವದ ಬಣ ಒಂದಾದರೆ, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ. ಪಿ. ಹರೀಶ್ ಬಣ ಮತ್ತೊಂದೆಡೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ಪರ ರೇಣುಕಾಚಾರ್ಯ ಅಂಡ್ ಟೀಂ ನಿಂತಿದ್ದರೆ, ಬಸನಗೌಡ ಪಾಟೀಲ್ ಯತ್ನಾಳ್ ಗುಂಪಿನಲ್ಲಿ ಸಿದ್ದೇಶ್ವರ, ಹರೀಶ್ ಇದ್ದಾರೆ.
ರಾಜ್ಯದಲ್ಲಿ ಬಣ ಬಡಿದಾಟ ಜೋರಾದಂತೆ ದಾವಣಗೆರೆಯಲ್ಲಿಯೂ ಆರೋಪ – ಪ್ರತ್ಯಾರೋಪ ಜೋರಾಗಿದೆ. ಈ ನಡುವೆ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜುನ್ ಅವರು, ಡಾ. ಜಿ. ಎಂ. ಸಿದ್ದೇಶ್ವರ
ಹಾಗೂ ಶಾಸಕ ಬಿ. ಪಿ. ಹರೀಶ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಪ್ರಕರಣದಲ್ಲಿ ತನ್ನ ತಂದೆ ಶಾಸಕರಾಗಿದ್ದಾಗ ಬಂಧನಕ್ಕೊಳಗಾಗಲು ಡಾ. ಜಿ. ಎಂ. ಸಿದ್ದೇಶ್ವರ ಮಾಡಿದ ಪಿತೂರಿಯೇ ಕಾರಣ. ನೂರಕ್ಕೆ ನೂರು ಅಧಿಕಾರದಲ್ಲಿದ್ದವರೇ ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿದರು. ಇದು
ಎಲ್ಲರಿಗೂ ಗೊತ್ತಿದ್ದ ವಿಚಾರ. ಕೇವಲ ಚುನಾವಣೆ ವೇಳೆ ಮಾತ್ರವಲ್ಲ, ಎರಡು ವರ್ಷಗಳ ಹಿಂದಿನಿಂದಲೂ ಪಿತೂರಿ ಮಾಡಿದ್ದರು. ನಮ್ಮ ಮೇಲಿನ ಹೊಟ್ಟೆ ಕಿಚ್ಚಿನಿಂದ ಪಿತೂರಿ ನಡೆಸಿ ಅಪಪ್ರಚಾರ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ
ಬಿಜೆಪಿ ಸೋಲಲು ನಾವ್ಯಾರು ಕಾರಣರಲ್ಲ. ಸಿದ್ದೇಶ್ವರ ಅವರ ಅಧಿಕಾರ ದರ್ಪ, ಹಣದ ಮದ, ದುರಹಂಕಾರದ ಪರಮಾವಧಿಯೇ ಕಾರಣ. ನಮ್ಮ ಮೇಲಿನ ದಾಳಿ ಆಗಲು ಸಿದ್ದೇಶ್ವರ ಅವರೇ ಕಾರಣ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಪ್ರವೀಣ್ ಜಾಧವ್, ರಾಜು ವೀರಣ್ಣ, ಚಂದ್ರು, ಮಲ್ಲಿಕಾರ್ಜುನ್ ಪಟ್ಲೆ, ನಾಗರಾಜ್, ಸುಮಂತ್ ಮತ್ತಿತರರು ಹಾಜರಿದ್ದರು.