SUDDIKSHANA KANNADA NEWS/ DAVANAGERE/ DATE:03-06-2024
ದಾವಣಗೆರೆ: ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಗೆ ರೇಣುಕಾಚಾರ್ಯ ಅವರು ತೆರಳಿ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.
ಇಂದು ಮಧ್ಯಾಹ್ನ 3.15ರ ಸುಮಾರಿನಲ್ಲಿ ಹಿರೇಕಲ್ಮಠ ನಿವಾಸದಿಂದ ನ್ಯಾಮತಿ ಪಟ್ಟಣಕ್ಕೆ ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಹೊರಡುವಾಗ ನನ್ನ ಮೊಬೈಲ್ ಸಂಖ್ಯೆ 9611900009 ನಂಬರ್ ಗೆ ಕರೆ ಬಂದಿದ್ದು, ಆಗ ಕರೆ ಸ್ವೀಕರಿಸಲಿಲ್ಲ. ಅದು ಇಂಟರ್ ನೆಟ್ ಕಾಲ್ ಆಗಿತ್ತು. ಆ ಬಳಿಕ ಮತ್ತೆ ಕರೆ ಬಂದಿದ್ದು, ನಾನು ಕರೆ ಸ್ವೀಕರಿಸಿದೆ. ಕೂಡಲೇ ಏಯ್ ನಿನ್ನನ್ನು ಮತ್ತು ನಿನ್ನ ಮಗನನ್ನು ಇಂದು ರಾತ್ರಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ನಾನು ಯಾರು ಎಂದು ಕೇಳುತ್ತಿದ್ದಂತೆ ಕರೆ ಕಟ್ ಆಗಿದೆ ಎಂದು ರೇಣುಕಾಚಾರ್ಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕೂಡ ನನಗೆ ಮತ್ತು ನನ್ನ ಕುಟುಂಬದವರಿಗೆ ಬೆದರಿಕೆ ಕರೆಗಳು ಬಂದಿದ್ದು, ನಾನು ಬೆಂಗಳೂರು ನಗರದ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದ್ದರಿಂದ ನನ್ನ ಹಾಗೂ ನನ್ನ ಕುಟುಂಬಗಳಿಗೆ ಪದೇ ಪದೇ ಮೊಬೈಲ್ ಮೂಲಕ ಬೆದರಿಕೆ ಕರೆಗಳು ಬರುತ್ತಿದ್ದು, ಅನಾಮಧೇಯ ವ್ಯಕ್ತಿಗಳನ್ನು ಪತ್ತೆ ಮಾಡಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ನನಗೆ ಹಾಗೂ ಕುಟುಂಬದವರಿಗೆ ಭದ್ರತೆ ನೀಡಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ.