SUDDIKSHANA KANNADA NEWS/ DAVANAGERE/ DATE:03-06-2024
ದಾವಣಗೆರೆ: ಇಂದಿನ ರಾಜಕಾರಣ ಕಲುಷಿತಗೊಂಡಿದೆ. ಕತ್ತಲು ರಾತ್ರಿ ಎಂಬುದು ಪ್ರಜಾಪ್ರಭುತ್ವದಲ್ಲಿ ಪದ್ಧತಿಯಾಗಿ ಮುಂದುವರಿದಿದೆ. ಚುನಾವಣಾ ಹಿಂದಿನ ರಾತ್ರಿಯಂದು ನಡೆಯುವ ಕತ್ತಲು ರಾತ್ರಿ ಆಟ ನಿಲ್ಲಬೇಕು. ಇದರ ನಿರ್ಮೂಲನೆ ಆಗಬೇಕು. ರಾಜಕಾರಣದಲ್ಲಿ ಇಂಥ ಕೆಟ್ಟ ಪದ್ಧತಿ ತೊಲಗಿದಾಗ ಮಾತ್ರ ರಾಜಕಾರಣದಲ್ಲಿ ಶುದ್ಧೀಕರಣ ಆಗುತ್ತದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಅಭಿಪ್ರಾಯಪಟ್ಟರು.
ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಹಾಗೂ ಸ್ವಾಭಿಮಾನಿ ಬಳಗವು ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲೆಯ ಯುವಕರಿಗಾಗಿ ಏರ್ಪಡಿಸಲಾಗಿದ್ದ ನಾಯಕತ್ವ ತರಬೇತಿ ಕಾರ್ಯಾಗಾರಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ
ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ವೇಳೆ ನಡೆಯುವ ಅಕ್ರಮಗಳು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಚಾರ ಎಂದು ಅಭಿಪ್ರಾಯಪಟ್ಟರು.
ಮಾಧ್ಯಮಗಳು ಇಂದಿನ ದಿನಗಳಲ್ಲಿ ಅಧಿಕಾರಸ್ಥರ ಕಪಿಮುಷ್ಟಿಯಲ್ಲಿವೆ. ಸರಿಯಾದ ಮಾಹಿತಿ ಬಿತ್ತರಿಸುತ್ತಿಲ್ಲ ಎಂಬ ಜನರ ಮಾತಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯದ ಬಗ್ಗೆ ಮಾಹಿತಿ ಎಲ್ಲರಿಗೂ ಇಲ್ಲ. ಮಾಧ್ಯಮಗಳು ಇದನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಹೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಗ್ರಾಮಗಳಲ್ಲಿಯೂ ಸ್ವಾಭಿಮಾನಿಗಳಾಗಿ, ಹೋರಾಟಗಾರರಾಗಿ, ಎಷ್ಟೇ ವಿರೋಧ ಇದ್ದರೂ ಜನರನ್ನು ಮನೆ ಮನೆಗೆ ಹೋಗಿ ನಾವು ತಲುಪಿದ್ದೇವೆ. 1946 ಬೂತ್ ಗಳಲ್ಲಿಯೂ ವಿನಯ್ ಕುಮಾರ್ ಗೆ ಮತ ನೀಡುವಂತೆ ಮನವಿ ಮಾಡಿದ್ದೀರಾ. ಒಳ್ಳೆಯ ರಾಜಕಾರಣದಿಂದ ಈ ಕೆಲಸ ಆಗಿದೆ. ಕಳೆದೊಂದು ವರ್ಷದಲ್ಲಿ ಯಾರನ್ನೂ ದ್ವೇಷವನ್ನೂ ಮಾಡದೇ ಚುನಾವಣೆ ಎದುರಿಸಿದ್ದೇವೆ. ನಾವೆಲ್ಲರೂ ಸೇರಿಕೊಂಡು ಆರೋಗ್ಯಕರ ಚುನಾವಣೆ ನಡೆಸಿದ್ದೇವೆ ಎಂದು ಹೇಳಿದರು.
ನನ್ನ ರಾಜಕೀಯ ಗುಣ ಮೆಚ್ಚಿ ಗುರುತಿಸುವ ಜೊತೆಗೆ ನಿಂತವರು ಸಾಕಷ್ಟು ಮಂದಿ. ಸುಳ್ಳು ಸುದ್ದಿ ಹಬ್ಬಿಸಿದರೂ ನಂಬದೇ ಇದನ್ನು ವಿರೋಧಿಸಿ ನನ್ನ ಪರವಾಗಿ ಗಟ್ಟಿಯಾಗಿ ಬಂದಿದ್ದು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಪ್ರಸ್ತುತ ರಾಜಕಾರಣದಲ್ಲಿ ಹೊಸಬರು, ಒಳ್ಳೆಯರು ಬೆಳೆಯುವುದು ಸುಲಭವಲ್ಲ ಎಂಬ ಸತ್ಯದ ಅರಿವು ನನಗೆ ಇದೆ. ಜನರಲ್ಲಿ ರಾಜಕೀಯ ಪ್ರಜ್ಞೆ ತರಬೇಕಾದ ಅವಶ್ಯಕತೆ ಇದೆ. ಗ್ರಾಮ ವಾಸ್ತವ್ಯ, ಪಾದಯಾತ್ರೆ, ಕಾಲ್ನಡಿಗೆ ಸೇರಿದಂತೆ ಜನರ ಬಳಿಗೆ ಹೋದೆ. ಜಿಲ್ಲೆಯ ಜನರು, ಮತದಾರರ ಜೊತೆ ನನ್ನ ಸಂಬಂಧ ಬೆಳೆಯಿತು. ತಂದೆ ತಾಯಿ ಹಾಕಿಕೊಟ್ಟ ಸಂಸ್ಕಾರದಲ್ಲಿ ಮುನ್ನಡೆಯುತ್ತಿದ್ದೇವೆ. ಚುನಾವಣೆ ಮಾಡುವಾಗ ಹೆದರಿಸಿದರು. ಜೀವನದಲ್ಲಿ ಒಮ್ಮೆ ಸಾಧಿಸಬೇಕೆಂದರೆ ಎಷ್ಟೇ ಕಷ್ಟವಾದರೂ ಪಡೆಯದೇ ಬಿಡುವುದಿಲ್ಲ. ಇದು ನಾನು ಅಳವಡಿಸಿಕೊಂಡಿರುವ ಸೂತ್ರ ಎಂದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮುನ್ನ, ಸ್ಪರ್ಧೆ ಮಾಡಿದ ಬಳಿಕ ಸಾಕಷ್ಟು ಸಮಸ್ಯೆಗಳು ಎದುರಾದವು. ಆದರೂ ನಾನು ಅಂಜಲಿಲ್ಲ. ಅಳುಕಲಿಲ್ಲ. ಖಂಡಿತವಾಗಿಯೂ ನಿಮ್ಮ ಪರವಾಗಿ ಇರುತ್ತೇನೆ, ದುಡಿಯುತ್ತೇನೆ. ಸಮಾಜಕ್ಕೆ ಒಳ್ಳೆಯದು ಮಾಡುವ ಕನಸು ಕಂಡಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಜೊತೆ ನೀವೆಲ್ಲರೂ ಇರುವುದರಿಂದ ಇದು ಸಾಧ್ಯವಾಗಿದೆ. ದಾವಣಗೆರೆಯಿಂದ ನನ್ನನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಸಿಇಏನ್ ಅಧಿಕಾರಿ ಪ್ರಸಾದ್ ಅವರು ಮಾತನಾಡಿ ಟೆಕ್ನಾಲಜಿ ಬೆಳೆದಂತೆ ಅಪರಾಧಗಳು ಕೂಡ ಹೆಚ್ಚಾಗುತ್ತದೆ, ಅವುಗಳಲ್ಲಿ ಬಹುಮಾನ ಬಂದಿದೆ, ಬ್ಯಾoಕ್ ನಿಂದ ಆಧಾರ್ ಲಿಂಕ್ ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿರುವುದು ವಿದ್ಯಾವಂತರು, ನೌಕರರೇ ಹೆಚ್ಚಾಗಿದ್ದಾರೆ. ಗೇಮ್ ಡೌನ್ ಲೋಡ್ ಮಾಡಿಕೊಳ್ಳುವಾಗ ಹುಷಾರಾಗಿರಿ. ಹಳ್ಳಿಗಾಡಿನ ಜನರು ಸಹ ಇಂತಹ ಸೈಬರ್ ಕ್ರೈಂ ಗಳಿಗೆ ಬಲಿಯಾಗುತ್ತಿರುವುದು ವಿಷಾದಕರ ಎಂದರು.
ವಕೀಲ ಯಲ್ಲಪ್ಪ ಹೆಗಡೆ ಮಾತನಾಡಿ ಯುವಜನರು ತಲೆಯ ಮಟ್ಟದಲ್ಲಿ ಚುನಾವಣೆ ಎದುರಿಸುವ ತುಂಬಾ ಕಷ್ಟಕರವಾಗಿದೆ, ಉಳ್ಳವರು ಎದುರು ಸಿರಿವಂತರ ಎದುರು ಚುನಾವಣೆ ಎದುರಿಸುವುದು ಅಷ್ಟು ಸುಲಭ ಅಲ್ಲ ಎಂದು ತಿಳಿಸಿದರು.
ರಾಣೆಬೆನ್ನೂರು ನ ಮಾಹಿತಿ ಹಕ್ಕು ತಜ್ಞ ಜೆ. ಎಂ. ರಾಜಶೇಖರ್, ಮಹಿಳಾ ಸಂಘಟಕಿ ಅನಿತಾ ಮಾತನಾಡಿದರು. ಸ್ವಾಭಿಮಾನಿ ಬಳಗದ ಶರತ್ ಕುಮಾರ್, ರಾಜು ಮೌರ್ಯ, ಒ. ಎನ್. ಸಿದ್ದಯ್ಯ,, ಪುರಂದರ ಲೋಕಿಕೆರೆ, ಶೌಕತ್ ಅಲಿ, ಕರಿಬಸಪ್ಪ, ಹೆಮ್ಮೆಣ್ಣ, ಅಯ್ಯಪ್ಪ ಗುಲ್ಬರ್ಗ, ಶಾಮನೂರು ಗೀತಾ ಮುರುಗೇಶ್, ಗಿರೀಶ್ ಚಿಕ್ಕುಬೂದಿಹಾಳ್, ರಂಗನಾಥ್ ಸೇರಿದಂತೆ ನೂರಾರು ಯುವಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.