SUDDIKSHANA KANNADA NEWS/ DAVANAGERE/ DATE:01-02-2024
ದಾವಣಗೆರೆ: ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ. ಕೆ. ಸುರೇಶ್ ಹೇಳಿಕೆ ಕೋಲಾಹಲ ಎಬ್ಬಿಸಿದೆ. ಇನ್ನು ಕೇಸರಿ ಕಲಿಗಳು ಮುಗಿ ಬಿದ್ದಿದ್ದಾರೆ.
ಸ್ವತಂತ್ರ್ಯಪೂರ್ವದಲ್ಲೇ ದೇಶವನ್ನು ವಿಭಜಿಸಿದ ಕಾಂಗ್ರೆಸ್ ಈಗ ಮತ್ತೊಮ್ಮೆ ದೇಶ ಒಡೆಯುವ ಮಾತುಗಳನ್ನು ಹೇಳುತ್ತಿರುವುದು ಅಚ್ಚರಿ ಏನು ಇಲ್ಲ..! ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ದೇಶ ಒಗ್ಗೂಡುವುದು ಇಷ್ಟವಿಲ್ಲ.
ಹೀಗಾಗಿಯೇ ಪದೇಪದೇ ಭಾರತ ವಿಭಜನೆಯ ಮಾತುಗಳನ್ನು ಕನವರಿಕೆ ಮಾಡುತ್ತಲೇ ಇದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಡಿ.ಕೆ.ಸುರೇಶ್ ಭಾರತವನ್ನು ಇಬ್ಭಾಗಿಸಿ ದಕ್ಷಿಣ ಭಾರತ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳಿರುವುದು ಬಾಯ್ತಪ್ಪಿದ ಮಾತಿನಿಂದಲ್ಲ. ಇದು ಕಾಂಗ್ರೆಸ್ನ ಗುಪ್ತ ಅಜೆಂಡಾ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಕಿಡಿಕಾರಿದ್ದಾರೆ.
ಭಾರತ, ಪಾಕಿಸ್ತಾನ ಇಬ್ಭಾಗಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಉತ್ತರ ಭಾರತದ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ತಮ್ಮ ಒಡೆದು ಆಳುವ ನೀತಿಯಿಂದ ದಕ್ಷಿಣ ಭಾರತದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ದುರಾಲೋಚನೆ ಇರಬಹುದು. ಪ್ರಜ್ಞಾವಂತ ಮತದಾರರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು. ಇದು ದೇಶದ ಸಮಸ್ತ ಸ್ವತಂತ್ರ್ಯ ಹೋರಾಟಗಾರರಿಗೆ ಅಪಮಾನ. ಡಿ.ಕೆ.ಸುರೇಶ್ ಹೇಳಿಕೆಗೆ ಕಾಂಗ್ರೆಸ್ ಬೆಂಬಲವಿದ್ದರೆ ಬಹಿರಂಗವಾಗಿ ಹೇಳಬೇಕು. ಇಲ್ಲದಿದ್ದರೆ ಕೂಡಲೇ ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಂದು ನೆಹರು ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಇಂದು ಉತ್ತರ – ದಕ್ಷಿಣವೆಂದು ಕಾಂಗ್ರೆಸ್ ಸಂಸದರು ಮಾತನಾಡುತ್ತಿದ್ದಾರೆ. ಮುಂದೊಂದು ದಿನ ಇವರ ಕೈಗೆ ಅಧಿಕಾರ ಸಿಕ್ಕರೆ
ಅಖಂಡ ಭಾರತದ ಸ್ಥಿತಿ ಏನಾಗುತ್ತದೆ ಎಂದು ಉಯಿಸಲು ಅಸಾಧ್ಯ? ಎಂದು ಹೇಳಿದ್ದಾರೆ.