SUDDIKSHANA KANNADA NEWS/ DAVANAGERE/ DATE:01-02-2024
ಬೆಂಗಳೂರು: ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ ಮನಸ್ಥಿತಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಡಿ. ಕೆ. ಸುರೇಶ್ ಅವರ ಬಾಯಲ್ಲಿ ಬಂದಿದೆ! ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಾಪ್ರಹಾರ ನಡೆಸಿದೆ.
ದೇಶವನ್ನೇ ತುಂಡು ಮಾಡುವ ಮತಾಂಧ ಜಿಹಾದಿಗಳನ್ನು ಬಳಸಿಕೊಂಡು ಅವರನ್ನು ಪೋಷಣೆ ಮಾಡುತ್ತಿರುವ ಕಾಂಗ್ರೆಸ್, ಇಂದು ಜಿಹಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಟೀಕಿಸಿದೆ.
ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆದಾದ ಮೇಲೂ ಕಾಂಗ್ರೆಸ್ಗೆ, ದೇಶವನ್ನು ಛಿದ್ರ ಮಾಡುವ ಮಹದಾಸೆ ಈಡೇರದೆ ಇರುವುದೇ ಇಂತಹ ಮತಿಗೇಡಿ ಹೇಳಿಕೆಗಳು ಹೊರ ಬರಲು ಕಾರಣ! ಎಂದು ಆರೋಪಿಸಿದೆ.
ಭಾರತದಲ್ಲಿ ಬದುಕುವ ಇಚ್ಛೆ ಇಲ್ಲದೆ ಇದ್ದರೆ, ದೇಶದ್ರೋಹಿ ಹೇಳಿಕೆಗಳನ್ನು ನೀಡುವುದು ಬಿಟ್ಟು ವಿಶಾಲ ಪ್ರಪಂಚದಲ್ಲಿ ಭಾರತ ಬಿಟ್ಟು ಬೇರೆ ಯಾವುದೇ ದೇಶಕ್ಕೆ ಕಾಂಗ್ರೆಸ್ನವರು ತೆರಳಬಹುದು! ಅದು ಕಾಂಗ್ರೆಸ್ಸಿಗರೇ ಸೃಷ್ಟಿಸಿದ ಪಾಕಿಸ್ಥಾನದಲ್ಲಿ ಕಾಂಗ್ರೆಸ್ಸಿಗರಿಗೆ ರಾಜ ಮರ್ಯಾದೆ ಸಿಕ್ಕರೂ ಸಿಗಬಹುದು ಎಂದು ವ್ಯಂಗ್ಯವಾಡಿದೆ.
ಇನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಸಿ. ಟಿ. ರವಿ, ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಬಹುತೇಕ ಕೇಸರಿ ಕಲಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.