Home ಕ್ರೈಂ ನ್ಯೂಸ್ 14 ವರ್ಷದ ಬಾಲಕಿಯ ಇ-ಮೇಲ್ ದಾಖಲೆ ಎಲ್ಲಿದೆ? ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್ ಕೇಸ್ ನಲ್ಲಿ ಕೃಪಾ ಆಳ್ವಾ ಸೇರಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಎಂ. ಲಕ್ಷ್ಮಣ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

14 ವರ್ಷದ ಬಾಲಕಿಯ ಇ-ಮೇಲ್ ದಾಖಲೆ ಎಲ್ಲಿದೆ? ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್ ಕೇಸ್ ನಲ್ಲಿ ಕೃಪಾ ಆಳ್ವಾ ಸೇರಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಎಂ. ಲಕ್ಷ್ಮಣ್!

Share
ಸಿದ್ದರಾಮಯ್ಯ
Share

ಬೆಂಗಳೂರು: ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ನವರೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಅವರು ಯಾವ ಸಂದರ್ಭದಲ್ಲಿ, ಯಾವ ಪ್ರಶ್ನೆಗೆ ಉತ್ತರವಾಗಿ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದವರು ಕಾಂಗ್ರೆಸ್ನ ಮಹಿಳೆಯೊಬ್ಬರ ಹೆಸರು ಪ್ರಸ್ತಾಪಿಸಿದಾಗ, ಮಂಗಳೂರಿನ ಕೃಪಾ ಆಳ್ವಾ ಅವರ ಹೆಸರು ನಮಗೂ ಗೊತ್ತಿದೆ, ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಯತೀಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ಅವರೂ ಸ್ಟಿಂಗ್ ಆಪರೇಷನ್ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ನವರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪಕ್ಕೆ ಅರ್ಥವಿಲ್ಲ” ಎಂದು ಹೇಳಿದರು.

“ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 2011ರಲ್ಲಿ ಸ್ಟಿಂಗ್ ಆಪರೇಷನ್ ನಡೆದಿದ್ದರೆ, ಅದಕ್ಕೆ ಸಂಬಂಧಿಸಿದ ಮೂಲ ವಿಡಿಯೊವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಸಿದ್ದರಾಮಯ್ಯ ಅವರು ಅದರಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ವಿಡಿಯೊ ಅಥವಾ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ. ಸುಮ್ಮನೆ ಆರೋಪ ಮಾಡುವ ಬದಲು ದಾಖಲೆಗಳನ್ನು ಜನರ ಮುಂದಿಡಲಿ” ಎಂದರು.

“2028ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ ಎಂದು ಹೇಳುವ ಮೂಲಕ ಅಧಿಕಾರಿಗಳಿಗೆ ಧಮಕಿ ಹಾಕುತ್ತಿದ್ದೀರಾ? ಹೆಸರು ಬರೆದಿಟ್ಟುಕೊಂಡು ಅಧಿಕಾರಿವರ್ಗವನ್ನು ಆಚೆಗೆ ಕಳುಹಿಸುತ್ತೀರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಮೇಲೆ ಧಮಕಿ ಹಾಕುವ ಕೆಲಸ ಮಾಡಬೇಡಿ. ಇದರ ಆಧಾರದ ಮೇಲೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬೇಕು. ನಮ್ಮ ಸರ್ಕಾರ ಆ ಕೆಲಸ ಮಾಡುತ್ತಿಲ್ಲ. ಈ ವಿಚಾರವಾಗಿ ನಮ್ಮ ಕಾರ್ಯಕರ್ತರಿಗೆ ಬೇಸರವಿದೆ” ಎಂದರು.

14 ವರ್ಷದ ಬಾಲಕಿಯ ಇ-ಮೇಲ್ ದಾಖಲೆ ಎಲ್ಲಿದೆ?

“2011ರಲ್ಲಿ 14 ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದ್ದು, ಆಕೆ ಇ-ಮೇಲ್ ಮೂಲಕ ದೂರು ನೀಡಿದ್ದಾಳೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಾಗಿದ್ದರೆ ಆ ಇ-ಮೇಲ್ನ ಪ್ರತಿ ನೀಡಲಿ. ಯಾರಿಗೆ ಮೇಲ್ ಕಳುಹಿಸಲಾಗಿದೆ, ಯಾವಾಗ ಕಳುಹಿಸಲಾಗಿದೆ, ದೌರ್ಜನ್ಯ ಎಸಗಿದವರು ಯಾರು ಎಂಬ ವಿವರಗಳನ್ನು ಬಹಿರಂಗಪಡಿಸಲಿ. ಇ-ಮೇಲ್ ನ ದಾಖಲೆ ಇಲ್ಲದೆ ಕೇವಲ ಹೇಳಿಕೆಗಳ ಮೂಲಕ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಬಾರದು” ಎಂದು ಆಗ್ರಹಿಸಿದರು.

“ಕೇಂದ್ರದಲ್ಲಿ 12-13 ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಕುಮಾರಸ್ವಾಮಿ ಅವರೂ ಮೂರು ವರ್ಷಗಳಿಂದ ಕೇಂದ್ರ ಸಚಿವರಾಗಿದ್ದಾರೆ. ಇಂತಹ ಗಂಭೀರ ದೌರ್ಜನ್ಯದ ಬಗ್ಗೆ ಇ-ಮೇಲ್ ಬಂದಿದ್ದರೆ ಈವರೆಗೆ ಏಕೆ ಕ್ರಮ ಕೈಗೊಂಡಿಲ್ಲ? ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕ್ರಮಕ್ಕೆ ಒತ್ತಾಯಿಸಬಹುದಿತ್ತಲ್ಲವೇ? ಈಗ ರಾಜಕೀಯ ಉದ್ದೇಶಕ್ಕಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿರುವುದೇಕೆ. ಈ ಪ್ರಕರಣದಲ್ಲಿ ಸತ್ಯಾಂಶಗಳನ್ನು ಮರೆಮಾಚಲು ಸಾಧ್ಯವಿಲ್ಲ. ದಾಖಲೆಗಳೊಂದಿಗೆ ಆರೋಪ ಮಾಡಬೇಕು. ತನಿಖೆಯಲ್ಲಿ ಯಾರ ಪಾತ್ರವಿದ್ದರೂ ಹೊರಬರಲಿದೆ. ಕುಮಾರಸ್ವಾಮಿ ಅವರ ಪಾತ್ರ ಸಾಬೀತಾದರೆ ಅವರ ವಿರುದ್ಧವೂ ಕಾನೂನು ಕ್ರಮ ಖಚಿತ” ಎಂದು ಪ್ರಶ್ನಿಸಿದರು.

ಕೃಪಾ ಆಳ್ವಾ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಸ್ಟಿಂಗ್ ಆಪರೇಷನ್ ನಡೆದ ಸಂದರ್ಭದಲ್ಲಿ ಅವರು ಕಾಂಗ್ರೆಸ್ನಲ್ಲೇ ಇದ್ದರು. ಅವರ ಹಿಂದೆ ಇದ್ದ ಕಾಂಗ್ರೆಸ್ ನಾಯಕರು ಯಾರು ಎಂದು ಕೇಳಿದಾಗ, “ತನಿಖೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂದು ಹೇಗೆ ಹೇಳುತ್ತೀರಿ? ತನಿಖೆಯಿಂದ ಎಲ್ಲವೂ ಹೊರಬರಲಿದೆ. ಕಾಂಗ್ರೆಸ್ನವರೇ ಭಾಗಿಯಾಗಿದ್ದರೂ ಅವರ ಪಾತ್ರವನ್ನು ಬಹಿರಂಗಪಡಿಸುವ ಕೆಲಸ ಮಾಡುತ್ತೇವೆ. ಇದು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಪ್ರಕರಣ. ಇದನ್ನು ಕಾಂಗ್ರೆಸ್ ಪಕ್ಷ ಹಗುರವಾಗಿ ಪರಿಗಣಿಸುವುದಿಲ್ಲ. ಪ್ರಕರಣದಲ್ಲಿ ಒಳಗಿನಿಂದ ಅಥವಾ ಹೊರಗಿನಿಂದ ಯಾರೇ ಭಾಗಿಯಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಮೇಲ್ ಮೂಲಕ ಕೊಟ್ಟಿರುವ ದೂರಿನ ಬಗ್ಗೆ ತನಿಖೆ ಆಗಿಲ್ಲ ಎಂದು ಕೇಳಿದಾಗ, “ಮೇಲ್ ಬಂದಿಲ್ಲ ಎಂದ ಮೇಲೆ ತನಿಖೆ ಎಲ್ಲಿಂದ ಮಾಡಲು ಸಾಧ್ಯ? ಮೇಲ್ ಕಾಪಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಕುಮಾರಸ್ವಾಮಿ ಅವರು ಹೇಳಿದ್ದಕ್ಕೆಲ್ಲ ತನಿಖೆ ಮಾಡಿಸುವುದಕ್ಕೆ ಸಾಧ್ಯವಿಲ್ಲ. ಮೇಲ್ ಬಂದಿದೆ ಎನ್ನುವುದಕ್ಕೆ ಅದರ ಪ್ರತಿ ಇರಬೇಕು. ಅದನ್ನು ನಮಗೆ ಕೊಡಿ, ತನಿಖೆ ಮಾಡಿಸುತ್ತೇವೆ. 14 ವರ್ಷದ ಬಾಲಕಿ ಮೇಲ್ ಕಳುಹಿಸಿದ್ದಾಳೆ ಎಂದು ಈಗ ಹೇಳುತ್ತಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರೇ ಮೇಲ್ ಬಂದಿದೆ ಎಂದು ಹೇಳಿದ್ದರು. ಆದರೆ, ಮೇಲ್ ಎಲ್ಲಿದೆ? ಅದರ ದಾಖಲೆ ತೋರಿಸಲಿ. ಮೇಲ್ ಬಂದಿರುವ ಪ್ರತಿ ಇದ್ದರೆ ಖಂಡಿತ ತನಿಖೆ ನಡೆಸಬಹುದು. ಸರ್ಕಾರ ಈ ವಿಚಾರದಲ್ಲಿ ತನಿಖೆ ನಡೆಸಲು ಸಿದ್ಧವಿದೆ. ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ತನಿಖೆ ನಡೆಸುವುದಕ್ಕೂ ನಮ್ಮ ಆಕ್ಷೇಪವಿಲ್ಲ. ಯಾವುದನ್ನೂ ಮುಚ್ಚಿಡುವ ಉದ್ದೇಶವೂ ಇಲ್ಲ” ಎಂದರು.

ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆ ನಡೆಸುತ್ತೀರಾ ಎಂದು ಕೇಳಿದಾಗ, “ಖಂಡಿತಾ, ನ್ಯಾಯಾಲಯದ ನಿರ್ದೇಶನದ ಮೇರೆಗೆ ತನಿಖೆ ನಡೆಸಲು ಸಿದ್ಧವಿದ್ದೇವೆ. ಇಲ್ಲಿ ನಾವು ಮುಚ್ಚಿ ಹಾಕುವುದೇನು ಇಲ್ಲ. 2023ರಲ್ಲಿ ಕೃಪಾ ಆಳ್ವಾ ಅವರು ಇದ್ದದ್ದು ಬಿಟ್ಟರೆ ಇದರ ಹಿಂದೆ ಕಾಂಗ್ರೆಸ್ ಪಕ್ಷದ ಬೇರೆ ನಾಯಕರು ಇಲ್ಲ. ಹೀಗಿರುವಾಗ ನಾವು ಯಾಕೆ ಪ್ರಕರಣ ಮುಚ್ಚಿಹಾಕಬೇಕು? ಸ್ಟಿಂಗ್ ಆಗಿದ್ದು, ಅದರ ವಿಡಿಯೋ ಇದ್ದಿದ್ದರೆ ಕುಮಾರಸ್ವಾಮಿ ಇಷ್ಟು ದಿನ ಬಿಡದೇ ಸುಮ್ಮನೇ ಇರುತ್ತಿದ್ದರಾ?” ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದಾಗ, “ನಾನು ನಿಮ್ಮ ಮೇಲೆ ಸ್ಟಿಂಗ್ ಮಾಡಿದರೆ ನಿಮಗೆ ಗೊತ್ತಾಗುವುದು ಹೇಗೆ? ನಾನು ಅದನ್ನು ಪ್ರಕಟಿಸಿದಾಗಲೇ ಅಲ್ಲವೇ ತಿಳಿಯುವುದು. ಸಿದ್ದರಾಮಯ್ಯ ಅವರಿಗೆ ಈ ಸ್ಟಿಂಗ್ ವಿಚಾರ ಗೊತ್ತಾಗಿದ್ದೇ ಈಗ ಈ ವಿಡಿಯೋ ಹೊರಗೆ ಬಂದ ಮೇಲೆ. ಆಗಲೇ ಅವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ತನಿಖೆ ಸರಿಯಾಗಿ ಹೋಗುತ್ತಿದೆಯೇ ಎಂದು ಕೇಳಿದಾಗ, “ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಸ್ವಲ್ಪ ಕಾಯಿರಿ. ಸ್ಟೀಂಗ್ ಆರೋಪ ಕಟ್ಟುಕತೆಯಲ್ಲ ಎಂಬುದಕ್ಕೆ ಒಂದೇ ಒಂದು ಸಣ್ಣ ದಾಖಲೆಯನ್ನು ಕುಮಾರಸ್ವಾಮಿ ಅವರಿಂದ ಬಿಡುಗಡೆ ಮಾಡಿಸಿ. ಈ ವಿಚಾರದಲ್ಲಿ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ? ಯಾಕೆಂದರೆ ಇದರಲ್ಲಿ ಏನೂ ಇಲ್ಲ ಎಂದು ಬಿಜೆಪಿಯವರಿಗೂ ಗೊತ್ತು. ಕರ್ನಾಟಕದಲ್ಲಿ ತಾವು ಎನ್ಡಿಎ ಮೈತ್ರಿಯ ನೇತೃತ್ವ ವಹಿಸಬೇಕು ಎಂದು ಕುಮಾರಸ್ವಾಮಿ ಈ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೂ ಸ್ಪಷ್ಟವಾಗಿ ಗೊತ್ತಿದೆ. ಸಣ್ಣ ವಿಚಾರಕ್ಕೂ ಬಾಯಿ ಬಡಿದುಕೊಳ್ಲುವ ಆರ್ ಅಶೋಕ್, ಸಿಟಿ ರವಿ ಈಗ ಮೌನವಾಗಿರುವುದೇಕೆ” ಎಂದರು.

ಹೈಕಮಾಂಡ್ ಮೌನವಾಗಿರುವ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, “ಹೈಕಮಾಂಡ್ ನಾಯಕರು ಮಾಧ್ಯಮಗಳ ಮುಂದೆ ಬಂದು ಧ್ವನಿ ಎತ್ತಬೇಕೆ? ಮಾಧ್ಯಮಗಳ ಮುಂದೆ ಎಲ್ಲವನ್ನು ಹೇಳಬೇಕು ಎಂದೇನಿಲ್ಲ. ಹೈಕಮಾಂಡ್ ನಲ್ಲಿ ರಾಜ್ಯದ ಉಸ್ತುವಾರಿಯಾಗಿ ಸುರ್ಜೆವಾಲ ಇದ್ದಾರೆ. ಕೆ ಸಿ ವೇಣುಗೋಪಾಲ್ ಇದ್ದಾರೆ. ಅವರು ಏನು ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಇಲ್ಲಿ ತನಿಖೆ ನಡೆಯಬೇಕು. ಅಲ್ಲೇ ಡ್ರಾ ಅಲ್ಲೇ ಬಹುಮಾನ ವ್ಯವಸ್ಥೆ ಇಲ್ಲ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಇದರಲ್ಲಿ ಯಾವುದೇ ಸಂಶಯಬೇಡ. ಡಿ ಕೆ ಶಿವಕುಮಾರ್ ಅವರು ಸಿಎಂ ಆಗಿ 130 ದಿನಗಳಾಗಿದೆ, ಇಷ್ಟರಲ್ಲಿ ಕುಮಾರಸ್ವಾಮಿ ಅವರು 67 ಮಾಧ್ಯಮಗೋಷ್ಠಿ ಮಾಡಿದ್ದಾರೆ. ಎಲ್ಲ ಮಾಧ್ಯಮಗೋಷ್ಠಿಯಲ್ಲೂ ಡಿ ಕೆ ಶಿವಕುಮಾರ್ ಅವರ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಿಲ್ಲ. ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರು ಅವರು ತಮ್ಮ ಕ್ಷೇತ್ರಕ್ಕೆ ಒಂದು ಕಾರ್ಖಾನೆ ನೀಡಲು ಆಗಿಲ್ಲ. 100 ಎಕರೆ ಕೇಳುತ್ತಾರೆ. ಅದನ್ನು ಕೊಡಲು ಹೋದರೆ 500 ಎಕರೆ ಬೇಕು ಅಂತಾರೆ. ಇನ್ನೆರಡು ವರ್ಷ ತಳ್ಳಿದರೆ ಅವಧಿ ಮುಗಿಯುತ್ತದೆ. ಈಗ ಸಿಎಂ ಆಗುವತ್ತ ಗಮನಹರಿಸಿದ್ದಾರೆ” ಎಂದರು

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles