ಗುಜರಾತ್: ಗುಜರಾತ್ನ ಸಾನಂದ್ ನಗರದ ಬಳಿಯ ವಿಂಚಿಯಾ ಗ್ರಾಮದಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದ ‘ಭುವೋ’ (ದೆವ್ವ ಬಿಡಿಸುವ) ವಂಶಪಾರಂಪರ್ಯ ಮೂಢನಂಬಿಕೆಯ ಪದ್ಧತಿಯನ್ನು ಅಂತ್ಯಗೊಳಿಸುವ ಉದ್ದೇಶದಿಂದ 37 ವರ್ಷದ ತಂದೆಯೊಬ್ಬ ತನ್ನ 10 ವರ್ಷದ ಕಂದಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ.
ಆರೋಪಿ ನರೇಶ್ ಎಂಬಾತ ತನ್ನ ತಂದೆಯಂತೆ ತಾನೂ ಸ್ಥಳೀಯವಾಗಿ ಆಧ್ಯಾತ್ಮಿಕ ಅಥವಾ ದೈವಿಕ ಮಾಧ್ಯಮವಾಗಿ ಸೇವೆ ಸಲ್ಲಿಸುತ್ತಿದ್ದನು. ಆದರೆ ತನ್ನ ಕುಟುಂಬದ ಮತ್ತೊಬ್ಬರು ಈ ಮೂಢನಂಬಿಕೆಯ ಪಾತ್ರವನ್ನು ಮುಂದುವರಿಸಬಾರದು ಎಂಬ ವಿರೂತ ಮನಸ್ಥಿತಿಯಿಂದ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 1 ರಂದು ಸಂಜೆ 7 ಗಂಟೆ ಸುಮಾರಿಗೆ ಮನೆಯ ಬಳಿಯ ಜೋಗಣಿ ಮಾತಾ ದೇವಸ್ಥಾನದ ಎದುರು ಮಗ ಕರಣ್ ಮೇಲೆ ಭೀಕರ ಹಲ್ಲೆ ನಡೆಸಲಾಗಿದ್ದು, ತೀವ್ರ ಗಾಯಗೊಂಡ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದಾನೆ. ರಾತ್ರಿ 9:30 ರ ಸುಮಾರಿಗೆ ಸ್ಥಳಕ್ಕೆ ಬಂದ ಕುಟುಂಬಸ್ಥರು ಹಾಗೂ ಪೊಲೀಸರಿಗೆ ರಕ್ತಸಿಕ್ತ ಬಟ್ಟೆಯಲ್ಲಿ ಮಗನ ಶವದ ಪಕ್ಕದಲ್ಲೇ ತಂದೆ ನರೇಶ್ ನಿದ್ರಿಸುತ್ತಿರುವ ದೃಶ್ಯ ಕಂಡುಬಂದಿದೆ.
ಬಾಲಕನ ಕಾಲುಗಳನ್ನು ಹಿಡಿದು ಮನೆಯ ದೇವಸ್ಥಾನದ ಜಗುಲಿಗೆ ಹಲವು ಬಾರಿ ಅಪ್ಪಳಿಸಿ, ಬಳಿಕ ಕೋಲಿನಿಂದ ಹೊಡೆದು ಹತ್ಯೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ತಾಯಿ ಹತ್ತು ದಿನಗಳ ಹಿಂದಷ್ಟೇ ತವರು ಮನೆಗೆ ತೆರಳಿದ್ದಳು, ಪರೀಕ್ಷೆ ಇದ್ದ ಕಾರಣ ಮಗ ಕರಣ್ ಇಲ್ಲೇ ಉಳಿದುಕೊಂಡಿದ್ದನು. ಸಾನಂದ್ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ, ಬಿಸ್ನೆಸ್ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಢನಂಬಿಕೆಗೆ ಬಲಿಯಾದ ಮಗ: ತಲೆಮಾರುಗಳಿಂದ ಬರುತ್ತಿದ್ದ ದೈವಿಕ ಮಾಧ್ಯಮದ (ಭುವೋ) ಸಂಪ್ರದಾಯವನ್ನು ತನ್ನ ಮಗನಿಗೆ ಮುಂದುವರಿಸಲು ಇಷ್ಟವಿಲ್ಲದೆ ಕಟುಕ ತಂದೆಯೇ ಹತ್ಯೆಗೈದಿದ್ದಾನೆ.
ಭೀಕರ ಹತ್ಯೆ ವಿವರ: ಮಗನ ಕಾಲುಗಳನ್ನು ಹಿಡಿದು ದೇವಸ್ಥಾನದ ಜಗುಲಿಗೆ ಅಪ್ಪಳಿಸಿ, ಕೋಲಿನಿಂದ ಹೊಡೆದು ಹತ್ಯೆ ಮಾಡಿ ರಕ್ತಸಿಕ್ತ ಬಟ್ಟೆಯಲ್ಲೇ ಆರೋಪಿ ನರೇಶ್ ಮಲಗಿದ್ದನು.
ಪೊಲೀಸರ ತನಿಖೆ: ತಾಯಿ ನೀಡಿದ ದೂರಿನ ಮೇರೆಗೆ ತ್ವರಿತವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಾನಸಿಕ ಮೌಲ್ಯಮಾಪನ (Psychological Evaluation) ನಡೆಸಲು ಚಿಂತನೆ ನಡೆಸಿದ್ದಾರೆ.





Leave a comment