Home ದಾವಣಗೆರೆ ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರದ್ದೇ ಕಥೆ, ಚಿತ್ರಕತೆ, ನಿರ್ದೇಶನ, ನಿರ್ಮಾಣ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರದ್ದೇ ಕಥೆ, ಚಿತ್ರಕತೆ, ನಿರ್ದೇಶನ, ನಿರ್ಮಾಣ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

Share
ಕುಮಾರಸ್ವಾಮಿ
Share

ಬೆಂಗಳೂರು,: “ಸ್ಟಿಂಗ್ ಪ್ರಕರಣದಲ್ಲಿ ಕಥೆ, ಚಿತ್ರಕತೆ, ನಿರ್ದೇಶನ, ನಿರ್ಮಾಣ ಎಲ್ಲವೂ ಕುಮಾರಸ್ವಾಮಿ ಅವರದ್ದೇ ಆಗಿದೆ. ಸ್ಟಿಂಗ್ ವಿಡಿಯೋ ಬಿಡುಗಡೆ ಮಾಡಿದವರು ಕುಮಾರಸ್ವಾಮಿ ಜೊತೆಗೆ ಕೆಲಸ ಮಾಡುವವರೇ ಆಗಿದ್ದಾರೆ” ಎಂದು ಕೆಪಿಸಿಸಿ ವಕ್ತಾರರಾದ ಎಂ ಲಕ್ಷ್ಮಣ್ ಅವರು ತಿಳಿಸಿದ್ದಾರೆ.

ನಗರದ ಮೌರ್ಯ ಹೊಟೇಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಲಕ್ಷ್ಮಣ್ ಅವರು ಸೋಮವಾರ ಮಾತನಾಡಿದರು.

“ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಳೆದ ಒಂದು ತಿಂಗಳಿನಿಂದ ಮಾಧ್ಯಮಗೋಷ್ಠಿಗಳ ಮೂಲಕ ಕರ್ನಾಟಕದ ಮಾನ ಮರ್ಯಾದೆಯನ್ನು ದೇಶದಲ್ಲಿ ಹರಾಜು ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ವಿಚಾರದಲ್ಲಿ ರಾಜಕೀಯ ಲಾಭ ಪಡೆಯುವ ಏಕೈಕ ಉದ್ದೇಶದಿಂದ ಕರ್ನಾಟಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಮಾರಸ್ವಾಮಿ ಅವರಿಗೆ ಸುಪಾರಿ ನೀಡಿ ರಾಜ್ಯ ಸರ್ಕಾರದ ತೇಜೋವಧೆ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯುವ ಪ್ರಯತ್ನ

“ಇದರ ಹಿಂದಿರುವ ಹುನ್ನಾರವನ್ನು ತನಿಖಾ ತಂಡ ಮಾಡಲಿದೆ. ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಒಂದೇ ಕಲ್ಲಲ್ಲಿ ನಾಲ್ಕು ಹಕ್ಕಿ ಹೊಡೆಯುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ತೇಜೋವಧೆ ಮೂಲಕ ಕಾಂಗ್ರೆಸ್ ವಿರುದ್ಧ ಅಹಿಂದ ಮತವನ್ನು ತಿರುಗಿಸುವುದು, ಡಿ ಕೆ ಶಿವಕುಮಾರ್ ಅವರ ಖ್ಯಾತಿ ಸಹಿಸಲಾಗದೇ 2028ರ ಚುನಾವಣೆ ಎದುರಿಸುವುದು. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತಂದು 2028ರಲ್ಲಿ ಮೈತ್ರಿ ಸರ್ಕಾರ ರಚಿಸುವುದು ಹಾಗೂ ಸುಳ್ಳಿನ ಮೂಲಕ ಜನರನ್ನು ನಂಬಿಸುವ ಪ್ರಯತ್ನ. ಈ ನಾಲ್ಕು ವಿಚಾರಗಳನ್ನು ಒಂದೇ ಸಮಯದಲ್ಲಿ ಮಾಡಲು ಹೊರಟಿದ್ದಾರೆ” ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಮುಗಿಸುವುದಾಗಿ ಮೋದಿ ಅವರಿಗೆ ಕುಮಾರಸ್ವಾಮಿ ಆಶ್ವಾಸನೆ

“ದಿನಾಂಕ 27.08.2026ರಂದು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸ್ಟಿಂಗ್ ವಿಚಾರವನ್ನು ಮೋದಿ ಅವರಿಗೆ ತೋರಿಸಿ, ಇದೊಂದು ಸ್ಟಿಂಗ್ ಪ್ರಕರಣದಿಂದ 2028ರಲ್ಲಿ ಕಾಂಗ್ರೆಸ್ ಪಕ್ಷ ಸೋಲಿಸಿ ರಾಜ್ಯದಲ್ಲಿ ಎನ್ ಡಿಎ ಸರ್ಕಾರ ರಚಿಸುತ್ತೇವೆ. 2029ರಲ್ಲಿ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಎನ್ ಡಿಎ ಅಬ್ಯರ್ಥಿಗಳನ್ನು ಗೆಲ್ಲಿಸಿ ನಿಮ್ಮನ್ನು ಮತ್ತೊಮ್ಮೆ ಪ್ರಧಾನಿ ಮಾಡಲಾಗುವುದು ಎಂಬ ಆಶ್ವಾಸನೆ ನೀಡಿರುವುದಾಗಿ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಮೋದಿ ಅವರು ಈ ಅಪ್ಪ ಮಗನಿಗೆ ‘ಗೋ ಹೆಡ್’ ಎಂದು ಅನುಮತಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿರುವ ಕುರಿತ ಆಡಿಯೋವನ್ನು ಮುಂದಿನ ದಿನಗಳಲ್ಲಿ ತನಿಖೆ ಬಳಿಕ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.

ಕುಮಾರಸ್ವಾಮಿ ಸಿಬ್ಬಂದಿಯಿಂದಲೇ ವಿಡಿಯೋ ಅಪ್ ಲೋಡ್

“ನಿನ್ನೆ ಪೊಲೀಸ್ ಆಯುಕ್ತರು ತನಿಖೆಯ ವರದಿ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಜತೆ ಕೆಲಸ ಮಾಡುತ್ತಿರುವ ರಿತೇಶ್ ಪಾಂಡೆ, ವಿನೋದ್ ಶರ್ಮಾ, ಪಿಆರ್ ಒ ಪ್ರಜ್ವಲ್ ಪ್ರಸಾದ್ ಎಂಬುವವರು ಇದರ ಹಿಂದೆ ಇದ್ದಾರೆ. ಪ್ರಜ್ವಲ್ ಪ್ರಸಾದ್ ಈ ಹಿಂದೆ ಬೆಂಗಳೂರಿನಲ್ಲಿ ಅತ್ಯಂತ ಪ್ರತಿಷ್ಠಿತ ಇಂಗ್ಲೀಷ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದವರು. ಈಗ ಆ ವಾಹಿನಿ ಇಲ್ಲ. ಅವರು ಸ್ಟಿಂಗ್ ಆಪರೇಷನ್ ಮಾಡುವ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರು ಸ್ಟಿಂಗ್ ಮಾಡುವುದರಲ್ಲಿ ನಿಪುಣರಾಗಿದ್ದರು” ಎಂದರು.

“ಈ ಮೂವರಲ್ಲಿ ಒಬ್ಬರಿಗೆ ಮಾಸಿಕ 2 ಲಕ್ಷ ಹಾಗೂ ಇತರೆ ಸೌಲಭ್ಯ, ಉಳಿದ ಇಬ್ಬರಿಗೆ ತಲಾ 1.50 ಲಕ್ಷ ಹಾಗೂ ಇತರೆ ಸೌಲಭ್ಯ ವೇತನ ನೀಡಲಾಗುತ್ತಿತ್ತು. ಬಾಗೇಪಲ್ಲಿ ಪ್ರಶಾಂತ್ ಎಂಬಾತ ಈ ಹಿಂದೆ ಪವರ್ ಟಿವಿಯ ರಾಕೇಶ್ ಶೆಟ್ಟಿ ಅವರ ಜತೆ ಕೆಲಸ ಮಾಡುತ್ತಿದ್ದ. ಈ ಸ್ಟಿಂಗ್ ವಿಡಿಯೋವನ್ನು 2023 ಫೆ.25ರಂದು ಸಿದ್ದರಾಮಯ್ಯ ಅವರ ಮನೆಯಲ್ಲಿ ಯಾವುದೇ ಮಹಿಳೆ ಕರೆದುಕೊಂಡು ಬಂದು ಮಾತನಾಡಿರುವುದು ಪ್ರಶಾಂತ್. ಆ ಸ್ಟಿಂಗ್ ವಿಡಿಯೋ ಕೆ.ಜೆ ಕೃಷ್ಣಾ ಎಂಬ ಮತ್ತೊಬ್ಬ ಪತ್ರಕರ್ತರು ಹಂಚಿಕೊಂಡಿದ್ದರು. ಈ ಪ್ರಶಾಂತ್ ಎಂಬಾತ ಕುಮಾರಸ್ವಾಮಿ ಅವರಿಗೆ ಆಪ್ತನಾಗಿದ್ದ. ಈತನೇ ಕುಮಾರಸ್ವಾಮಿ ಅವರಿಗೆ ಈ ಸ್ಟಿಂಗ್ ವಿಡಿಯೋ ನೀಡಿದ್ದಾನೆ. ಕುಮಾರಸ್ವಾಮಿ ಅವರಿಗೆ ನೇರವಾಗಿ ನೀಡದೇ ಇದ್ದರೂ ಪ್ರಜ್ವಲ್ ಪ್ರಸಾದ್ ಅವರ ಮೂಲಕ ನೀಡಿರುತ್ತಾರೆ. ಆನಂತರ ಕತೆ, ಚಿತ್ರಕತೆ, ನಿರ್ದೇಶನವನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಲಾಗಿದೆ” ಎಂದರು.

ಕುಮಾರಸ್ವಾಮಿ ಉಪಸ್ಥಿತಿಯಲ್ಲೇ ವಿಡಿಯೋ ಅಪ್ ಲೋಡ್ ಎಂದು ರಿತೀಶ್ ಪಾಂಡೆ ಹೇಳಿಕೆ

“ಪ್ರಜ್ವಲ್ ಪಾಂಡೆ ಅವರು ರಿತೇಶ್ ಪಾಂಡೆ ಹಾಗೂ ವಿನೋದ್ ಶರ್ಮಾ ಅವರಿಂದ ಎರಡು ಮೊಬೈಲ್ ಖರೀದಿಸಿ ಅದೇ ಅಂಗಡಿಯಲ್ಲಿ ಇಂಟರ್ ನೆಟ್ ಸಂಪರ್ಕ ಪಡೆದಿರುವಾಗ ಸಿಸಿಬಿ ಪೊಲೀಸರಿಗೆ ಐಎಂಎ ಸಂಖ್ಯೆ ಸಿಕ್ಕಿದೆ. ನಂತರ ಆ ಮೊಬೈಲ್ ಗಳನ್ನು ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ತೆಗೆದುಕೊಂಡು ಹೋಗಿ ಅಪ್ ಲೋಡ್ ಮಾಡಲಾಗಿದೆ. ಇದರ ಸಮಯ ಎಲ್ಲವೂ ಪೊಲೀಸ್ ತನಿಖಾಧಿಕಾರಿಗಳ ಬಳಿ ಇದೆ. ರಿತೇಶ್ ಪಾಂಡೆ ಅವರನ್ನು 7-8 ಬಾರಿ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದು, ಆತ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ. ವಿಡಿಯೋ ಅಪ್ ಲೋಡ್ ಮಾಡುವಾಗ ಕುಮಾರಸ್ವಾಮಿ ಅವರು ಅಲ್ಲೇ ಉಪಸ್ಥಿತರಿದ್ದರು ಎಂದು ಆತನ ಹೇಳಿಕೆಯಲ್ಲಿ ದಾಖಲಾಗಿದೆ” ಎಂದರು.

ಪ್ರಜ್ವಲ್ ಪ್ರಸಾದ್, ರಿತೀಶ್ ಪಾಂಡೆ, ವಿನೋದ್ ಶರ್ಮಾ ನಡುವೆ 29,30,000 ರೂ. ಹಣಕಾಸಿನ ವ್ಯವಹಾರ

“ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೊಬೈಲ್ ಖರೀದಿಗೆ ಬಳಸಲಾದ 50 ಸಾವಿರ ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಲಾಗಿದ್ದು, ಪ್ರಜ್ವಲ್ ಪ್ರಸಾದ್ ಹಾಗೂ ರಿತೇಶ್ ಪಾಂಡೆ, ವಿನೋದ್ ಶರ್ಮಾ ಅವರ ನಡುವೆ ನಂತರ 3 ದಿನಾಂಕಗಳಲ್ಲಿ 29,30,000 ಹಣಕಾಸಿನ ವ್ಯವಹಾರವಾಗಿದೆ. ಪ್ರಜ್ವಲ್ ಪ್ರಸಾದ್ ಅವರನ್ನು ಹಿಡಿದರೆ ಈ ಹಣ ಎಲ್ಲಿಂದ ಬಂತು, ಯಾಕೆ ಬಂತು ಎಂಬ ಮಾಹಿತಿ ಸಿಗುತ್ತದೆ. ಈ ಮೂವರು ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣದ ಕಂಟೆಟ್ ಕ್ರಿಯೇಟರ್ ಗಳಾಗಿ ಕೆಲಸ ಮಾಡುವವರು” ಎಂದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles