ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಯುವಕ ಶಿವಾ ಶರ್ಮಾ (28) ಕೊಲೆ ಪ್ರಕರಣದ ಮುಖ್ಯ ಆರೋಪಿ, ಫ್ಯಾಷನ್ ಮಾಡೆಲ್ ಶ್ರದ್ಧಾ ದುಬೆ (31) ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ತಲೆಮರೆಸಿಕೊಂಡಿದ್ದ ಆಕೆಯನ್ನು ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಮತ್ತು ಲಖನೌ ಪೊಲೀಸರು ಮಹಾರಾಷ್ಟ್ರದ ನಾಗ್ಪುರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಲಖನೌದ ಹಜರತ್‌ಗಂಜ್ ಪ್ರದೇಶದ ಅಪಾರ್ಟ್‌ಮೆಂಟ್ ಒಂದರ ಬಾಲ್ಕನಿಯಿಂದ ಬಿದ್ದು ಶಿವಾ ಶರ್ಮಾ ಅಕ್ಟೋಬರ್ 9 ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತಾದರೂ, ಮೃತನ ಕುಟುಂಬಸ್ಥರು ಆತನ ಮೇಲೆ ತೀವ್ರ ಹಲ್ಲೆ ನಡೆಸಿ, ಕಿರುಕುಳ ನೀಡಿ ಮೇಲಿಂದ ಎಸೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ತನಿಖೆ ವೇಳೆ ಯುವಕನ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳು ಪತ್ತೆಯಾಗಿದ್ದು, ಹತ್ಯೆಯ ಶಂಕೆ ವ್ಯಕ್ತವಾಗಿತ್ತು.
ಕೊಲೆ ಮತ್ತು ಕಿರುಕುಳ ಆರೋಪ: ಶ್ರದ್ಧಾ ದುಬೆ ಮತ್ತು ಆಕೆಯ ಸಹೋದರಿ ರಶ್ಮಿ ಸೇರಿ ಶಿವಾ ಶರ್ಮಾನನ್ನು ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೊಳಪಡಿಸಿ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ರಂಜನಾ ಶರ್ಮಾ ದೂರು ನೀಡಿದ್ದಾರೆ.
ತಲೆಮರೆಸಿಕೊಳ್ಳಲು ಸಂಚು: ಅಕ್ಟೋಬರ್ 9 ರಿಂದ ತಲೆಮರೆಸಿಕೊಂಡಿದ್ದ ಶ್ರದ್ಧಾ ದುಬೆ, ಕಾನ್ಪುರ, ಆಗ್ರಾ, ಹಾಗೂ ನೇಪಾಳ ಗಡಿ ಭಾಗಗಳಲ್ಲಿ ಸಂಚರಿಸಿದ್ದಳು. ಇತರರ ಮೊಬೈಲ್ ಮೂಲಕ ವಾಟ್ಸಾಪ್ ಕರೆಗಳನ್ನು ಮಾಡುತ್ತಾ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ್ದಳು.
ಇನಾಮು ಘೋಷಣೆ: ಆರೋಪಿಗಳ ಸುಳಿವು ನೀಡಿದವರಿಗೆ ಲಖನೌ ಪೊಲೀಸರು ಮೊದಲು ₹25,000 ಇನಾಮು ಘೋಷಿಸಿದ್ದು, ನಂತರ ಅದನ್ನು ₹50,000 ಕ್ಕೆ ಹೆಚ್ಚಿಸಿದ್ದರು.
ಆರೋಪಿ ಶ್ರದ್ಧಾ ದುಬೆ ತಾನು ಮುಗ್ಧೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡು, ಶಿವಾ ಶರ್ಮಾ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಾದಿಸಿದ್ದಳು. ಆದರೆ ಮೃತನ ಕುಟುಂಬದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಆಕೆಯನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





Leave a comment