ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದೆ. ಬಂಧಿತರನ್ನು ಕುನಾಲ್, ಸುಮಿತ್, ರಾಧಾ ಮತ್ತು ಬಬಿತಾ ಎಂದು ಗುರುತಿಸಲಾಗಿದ್ದು, ಇವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಾದ ರಾಧಾ ಮತ್ತು ಬಬಿತಾ ಉತ್ತರ ಪ್ರದೇಶ ಮೂಲದವರಾಗಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಕೊರಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಇವರು ದೆಹಲಿಯಿಂದ ರೈಲಿನ ಮೂಲಕ ಮುಂಬೈಗೆ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ತೆಗೆದುಕೊಂಡು ಹೋಗಿ, ಅಲ್ಲಿ ಗ್ಯಾಂಗ್‌ನ ಹ್ಯಾಂಡ್ಲರ್ ಸೂಚನೆಯಂತೆ ಅಪ್ರಾಪ್ತ ಬಾಲಕನಿಗೆ ಹಸ್ತಾಂತರಿಸಿದ್ದರು. ದಾಳಿ ನಡೆದ ನಂತರ ವಾಪಸ್ ತೆರಳುತ್ತಿದ್ದಾಗ ದೆಹಲಿ ಮತ್ತು ಹರಿಯಾಣದಲ್ಲಿ ಇವರನ್ನು ಬಂಧಿಸಲಾಗಿದೆ.
ಶಸ್ತ್ರಾಸ್ತ್ರ ಸರಬರಾಜು: ಅಮೃತಸರದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ಎನ್‌ಕ್ರಿಪ್ಟೆಡ್ ಆಪ್ ಮೂಲಕ ಗ್ಯಾಂಗ್‌ಸ್ಟರ್ ಅನಿಲ್ ಪಂಡಿತ್ ನೀಡಿದ ಸೂಚನೆ ಆಧರಿಸಿ ಮುಂಬೈಗೆ ರವಾನಿಸಲಾಗಿತ್ತು.
ಮುಂಬೈ ಪೊಲೀಸರ ವಶಕ್ಕೆ: ದೆಹಲಿ ನ್ಯಾಯಾಲಯವು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರ ವಶಕ್ಕೆ ನೀಡಿದ್ದು, 3 ದಿನಗಳ ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿದೆ.
ಶೂಟರ್‌ಗಳ ಬಂಧನ: ಈ ಹಿಂದೆ ರಾಜಸ್ಥಾನದ ಕೋಟಾದಲ್ಲಿ ಮೂವರು ಶೂಟರ್‌ಗಳನ್ನು ಪೊಲೀಸರು ಬಂಧಿಸಿ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದರು.
ಅಕ್ಟೋಬರ್ 18 ರಂದು ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಟೈಗರ್ ಶ್ರಾಫ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಅವರ ಚಾಲಕ ಮತ್ತು ಹಾದಿಹೋಕನಿಗೆ ಗಾಯಗಳಾಗಿದ್ದವು. ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.





Leave a comment