SUDDIKSHANA KANNADA NEWS/ DAVANAGERE/ DATE:30-01-2025
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡನೆ ಮಾಡಲಿರುವ ಕೇಂದ್ರದ ಬಜೆಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ಅದರಲ್ಲಿಯೂ ಪ್ರಮುಖವಾಗಿ ಕೇಂದ್ರ ಬಜೆಟ್ ನಲ್ಲಿ ಹಲವು ಉಡುಗೊರೆಗಳು ದೇಶದ ಜನರಿಗೆ ಸಿಗಲಿವೆ. ಈ ನಡುವೆ ಎಲ್ ಪಿ ಜಿ ಸಿಲಿಂಡರ್ ದರ ಕಡಿತಗೊಳಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಈ ಮೂಲಕ ಮಹಿಳೆಯರ ಮನ ಗೆಲ್ಲಲು ನಿರ್ಮಲಾ ಸೀತಾರಾಮನ್ ಪ್ಲ್ಯಾನ್ ಹಾಕಿಕೊಂಡಿದ್ದಾರೆ.
ಖರ್ಚು ವೆಚ್ಚ ದುಬಾರಿಯಾದ ಕಾರಣ ಮಧ್ಯಮವರ್ಗವು ಚಿಂತಾಕ್ರಾಂತವಾಗಿದೆ. ಇದನ್ನು ನೀಗಿಸಲು ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ದರ ಕಡಿಮೆಗೊಳಿಸುವ ಮೂಲಕ ಮಧ್ಯಮವರ್ಗದವರ ಮನಸ್ಸು ಗೆಲ್ಲಲು ತಂತ್ರ ರೂಪಿಸಿದೆ. ಮಾತ್ರವಲ್ಲ, ಈ ಘೋಷಣೆಯೇ ಪ್ರಮುಖ ವಿಚಾರ ಆಗಬಹುದು ಎಂದು ಹೇಳಲಾಗುತ್ತಿದೆ.
LPG ಸಬ್ಸಿಡಿಗಾಗಿ 40,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸುವಂತೆ ತೈಲ ಸಚಿವಾಲಯವು ಕೇಂದ್ರ ಸರ್ಕಾರವನ್ನು ಕೇಳಿದೆ. ಈ ಕಾರಣದಿಂದ ಬಜೆಟ್ ನಲ್ಲಿ ದರ ಕಡಿತಗೊಳಿಸುವ ವಿಚಾರ ಬಹುಮುಖ್ಯವಾಗಲಿದೆ. ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಪರಿಹಾರವನ್ನು ಪಡೆಯುತ್ತವೆ. ಆದ್ರೆ, ಇದಕ್ಕೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಬೇಕಷ್ಟೇ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಪ್ರಸ್ತುತ, ಗೃಹಬಳಕೆಯ LPG ಸಿಲಿಂಡರ್ ಬೆಲೆ 800 ರೂಪಾಯಿ. ಬಜೆಟ್ ನಲ್ಲಿ ಸಬ್ಸಿಡಿ ಹೆಚ್ಚಿಸಿದರೆ ಸಾಮಾನ್ಯ ಜನರಿಗೆ ಹಣದುಬ್ಬರದಿಂದ ಮುಕ್ತಿ ಸಿಗಲಿದೆ. ಆದರೆ ಬಜೆಟ್ ಮಂಡನೆ ಬಳಿಕವಷ್ಟೇ ಗೊತ್ತಾಗಲಿದೆ.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಹೊಸ ಬೆಲೆಯನ್ನು ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿ ತಿಂಗಳ ಒಂದನೇ ತಾರೀಖಿನಂದು ಘೋಷಿಸುತ್ತವೆ. 2025ರ ಜನವರಿ ಪ್ರಾರಂಭದ ದಿನ ಅಂದರೆ ಜನವರಿ 1, 2025 ರಂದು ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ. ಆದರೆ, ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
ವಾಣಿಜ್ಯ LPG ಸಿಲಿಂಡರ್ನ ಬೆಲೆಯನ್ನು ರೂ.14.50 ರಷ್ಟು ಕಡಿತಗೊಳಿಸಲಾಗಿತ್ತು. 6 ತಿಂಗಳ ನಂತರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕುಸಿದಿತ್ತು. ಜನವರಿ ತಿಂಗಳಿಗೂ ಮೊದಲು ವಾಣಿಜ್ಯ ಅನಿಲ ಸಿಲಿಂಡರ್ಗಳು ಸತತ 6 ತಿಂಗಳವರೆಗೆ ಅಂದರೆ ಜುಲೈನಿಂದ ಡಿಸೆಂಬರ್ವರೆಗೆ ಸಿಲಿಂಡರ್ ಗ್ಯಾಸ್ ಬೆಲೆ ಕಡಿಮೆ ಆಗಿರಲೇ ಇಲ್ಲ.