SUDDIKSHANA KANNADA NEWS/ DAVANAGERE/ DATE:30-01-2025
ದಾವಣಗೆರೆ: ಸುಕನ್ಯಾ ಸಮೃದ್ದಿ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಒಟ್ಟು 1,08,500 ರೂ ವಂಚಿಸಿ ಅಧಿಕಾರ ದುರುಪಯೋಗಪಡಿಸಿದ ಆರೋಪಿಗೆ 1 ವರ್ಷ 6 ತಿಂಗಳಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಚನ್ನಗಿರಿ ತಾಲೂಕಿನ ಚಿರಡೋಣಿ ಪೋಸ್ಟ್ ಆಫೀಸ್ ಅಂಚೆ ಪಾಲಕ ಕೆ. ಆರ್. ಶ್ರೀಕಾಂತ್ ಶಿಕ್ಷೆಗೊಳಪಟ್ಟವರು. 2018ರ ಸೆಪ್ಟಂಬರ್ 24ರಂದು ಶಿವಮೊಗ್ಗ ಪೂರ್ವ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಗಣೇಶ ಡಿ.ಅವರು, ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಚಿರಡೋಣಿ ಅಂಚೆಪಾಲಕ ಕೆ. ಆರ್. ಶ್ರೀಕಾಂತ್ ಅವರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಸಾರ್ವಜನಿಕರಾದ ಯಶಶ್ವಿನಿ ತಾಯಿ ರೂಪ.ಯು. ಇವರ ಸುಕನ್ಯ ಸಮೃದ್ಧಿ ಖಾತೆ ನಂ:6136566171 ನೇ ಖಾತೆಗೆ ಜಮಾ ಮಾಡಲು ನೀಡಿದ ಹಣ ಒಟ್ಟು-64,000, ಸಿ.ಎಂ ದೀಕ್ಷಾ ಖಾತೆ ನಂ:6136565441 ನೇ ಖಾತೆಗೆ ಒಟ್ಟು 10,500, ಮೇಘನಾ ಎಸ್.ಎಂ. ಖಾತೆ ನಂ:6136565523 ನೇ ಖಾತೆಗೆ ಒಟ್ಟು 15,000-ರೂ., ಎಂ.ಜಿ ಸಹನಾ ಇವರ ಖಾತೆ ನಂ:6136565509 ನೇ ಖಾತೆಗೆ ಒಟ್ಟು 19,000 ಸೇರಿದಂತೆ ಈ ಖಾತೆಗಳಿಂದ ಒಟ್ಟು 1,08,500 ರೂಪಾಯಿಗಳನ್ನು ಪಡೆದಿದ್ದರು.
ಮಾಸಿಕವಾಗಿ ಅಂಚೆ ಇಲಾಖೆಗೆ ಜಮಾಮಾಡಲು ಪಡೆದುಕೊಂಡು ಖಾತೆದಾರರ ಪಾಸ್ ಪುಸ್ತಕದಲ್ಲಿ ದಿನಾಂಕ ಮತ್ತು ಅಂಚೆ ಮುದ್ರೆ ಹಾಕಿ ಹಿಂದಿರುಗಿಸಿದ್ದು ಪಡೆದುಕೊಂಡ ಹಣವನ್ನು ಅಂಚೆ ಇಲಾಖೆಯ ಲೆಕ್ಕ ಶಿರ್ಷಿಕೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ಜನರಿಗೆ ಮೋಸ ಮಾಡಿದ್ದರು. ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತ ನೀಡಿದ ದೂರಿನ ಮೇರೆಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ತನಿಖಾಧಿಕಾರಿಯಾದ ಬಸವಾಪಟ್ಟಣ ಉಪನಿರೀಕ್ಷಕರಾದ ಕಿಲೋವತಿ ಅವರು ತನಿಖೆ ಕೈಗೊಂಡು ಆರೋಪಿ ಕೆ. ಆರ್. ಶ್ರೀಕಾಂತ್ ಎಂಬಾತನು ಸಾರ್ವಜನಿಕರಿಂದ ಸುಕನ್ಯ ಸಮೃದ್ಧಿ ಯೋಜನೆಯಡಿ ಹಣ ಪಡೆದು ಸಾರ್ವಜನಿಕರ ಖಾತೆಗೆ ಜಮಾ ಮಾಡದೇ ಒಟ್ಟು 1,08,500 ರೂ. ವಂಚನೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿರುವುದರಿಂದ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ಚನ್ನಗಿರಿ ಘನ ಪ್ರಧಾನ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಯ್ಯ ಬಿ. ಗಂಗಾಧರಮಠ ರವರು ಆರೋಪಿತನಾದ ಶ್ರೀಕಾಂತ್ ಕೆ.ಆರ್. ಮೇಲಿನ ಆರೋಪ ಸಾಬೀತಾದ್ದರಿಂದ 1 ವರ್ಷ ಆರು ತಿಂಗಳ ಕಾಲ ಕಠಿಣ ಕಾರಾಗೃಹ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.
ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿಯಾದ ಕಿಲೋವತಿ, ಸರ್ಕಾರದ ಪರವಾಗಿ ನ್ಯಾಯ ಮಂಡನೆ ಮಾಡಿದ ಸಹಾಯಕ ಸರ್ಕಾರಿ ಅಭಿಯೋಜಕಿ ಮಂಜವ್ವ ದಾಸರ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.