SUDDIKSHANA KANNADA NEWS/ DAVANAGERE/ DATE:28-10-2024
ದಾವಣಗೆರೆ: ಇಂದು ರಾಜಕೀಯ ಅಸ್ತಿತ್ವ ಪಡೆಯುವುದು ಅಷ್ಟು ಸುಲಭವಿಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಸ್ವಾಭಿಮಾನದ ಕೆಚ್ಚೆದೆಯ ಹಕ್ಕು ಪಡೆಯೋಣ. ಶೈಕ್ಷಣಿಕ ಕ್ರಾಂತಿ ಆದರೆ ಇದು ಸಾಧ್ಯವಾಗುತ್ತದೆ ಎಂದು ದೇಶದ ಪ್ರತಿಷ್ಠಿತ ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ಪ್ರತಿಪಾದಿಸಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಕುರುಬ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಕುರುಬ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಆಗಬೇಕಿದ್ದು, ಶೈಕ್ಷಣಿಕ ಕ್ರಾಂತಿಯಾದಲ್ಲಿ ಮಾತ್ರ ನಮ್ಮ ಮನೆ, ಪರಿಸರ, ಕೇರಿ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಬದಲಾವಣೆ ಆಗುತ್ತದೆ. ಹೆಣ್ಣು ಮಕ್ಕಳು ಯಾವುದೋ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರೂ ವಿದ್ಯಾವಂತರಾದಾಗ ನಮ್ಮಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ ಜಾಗೃತಿ ಮೂಡಲು ಸಾಧ್ಯ ಎಂದು ತಿಳಿಸಿದರು.
ಹಿಂದುಳಿದ, ದಲಿತ ಅಲ್ಪಸಂಖ್ಯಾತ, ದಲಿತ ಸಮುದಾಯಗಳಲ್ಲಿ ಹೆಣ್ಣು ಮಕ್ಕಳನ್ನು ಹೊರಗೆ ಕಳಿಸಲು ಹಿಂದೇಟು ಹಾಕಲಾಗುತ್ತಿದೆ. ಶಿಕ್ಷಣ ಕೊಡಿಸುವಲ್ಲಿ ಯಾವುದೇ ಕಾರಣಕ್ಕೆ ಹಿಂಜರಿಯಬಾರದು. ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಮುಂದೆ ಬರಲು ಆಗುತ್ತದೆ. ಐಎಎಸ್, ಐಪಿಎಸ್ ಉನ್ನತ ಶಿಕ್ಷಣ ಕೇವಲ ಉಳ್ಳವರ ಸ್ವತ್ತಲ್ಲ. ಬಡವರು, ಆರ್ಥಿಕವಾಗಿ ಹಿಂದುಳಿವದರು, ಸಮಾಜದ ಕಟ್ಟಕಡೆಯ ಸಮುದಾಯದವರಿಗೂ ತರಬೇತಿ ಕೊಡಿಸಿ ಉನ್ನತ ಉದ್ಯೋಗ ಪಡೆಯುವಂತಾಗಲು ಸಹಕರಿಸಬೇಕು. ತೊಟ್ಟಿಲು ತೂಗುವ ಕೈ ಇಡೀ ದೇಶವನ್ನೇ ತೂಗುವಂಥ ಶಕ್ತಿ ಇದೆ. ಹೆಣ್ಣು ಇವತ್ತು ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲ. ಪುರುಷರಿಗೆ ಸಮಾನವಾಗಿ ಎಲ್ಲಾ ರಂಗಗಳಲ್ಲಿಯೂ ಸರಿಸಾಟಿಯಾಗಿ ನಿಲ್ಲಬಲ್ಲಳು ಎಂದು ಹೇಳಿದರು.
ಬಡಕುಟುಂಬದಲ್ಲಿ ಜನಿಸಿ ಇಂದು 13,000 ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ವಿದ್ಯಾರ್ಥಿಗಳನ್ನು ತಯಾರು ಮಾಡಿ ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ, ವಿವಿಧ ಇಲಾಖೆಗಳಲ್ಲಿ ಸುಮಾರು 1300ಕ್ಕೂ ಹೆಚ್ಚು ಐಎಎಸ್, ಐಪಿಎಸ್ ತರಬೇತಿ ಪಡೆದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ವಿವಿಧ ಉನ್ನತ ಉದ್ಯೋಗದಲ್ಲಿದ್ದಾರೆ. ಇದು ಇನ್ಸೈಟ್ಸ್ ಸಂಸ್ಥೆಯ ಹೆಗ್ಗಳಿಕೆ. ಉತ್ತರದ ಜಮ್ಮು ಕಾಶ್ಮೀರದಿಂದ ಹಿಡಿದು ದಕ್ಷಿಣದ ದಾವಣಗೆರೆ, ಮೈಸೂರಿನ ತನಕ ಹಲವಾರು ಶಾಖೆಗಳನ್ನು ಸ್ಥಾಪಿಸಿ ಕಡು ಬಡವರ ಮಕ್ಕಳು ಕೂಡ ಅಧಿಕಾರಗಳಾಗಬಲ್ಲರು ಎಂಬುದನ್ನು ನಿಜ ಮಾಡುತ್ತಿರುವುದು ನಮ್ಮ ಸಂಸ್ಥೆ ಎಂದು ವಿವರಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದೆ. ಆದ್ರೆ, ರಾಜಕಾರಣ ನಾನು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ನನಗೆ ಅರಿವಾಯಿತು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿದೆ. ಜನರ ಪ್ರೀತಿಯ ಒತ್ತಡಕ್ಕೆ ಮಣಿದು ಕಣಕ್ಕಿಳಿದೆ. ಇಡೀ ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಕ್ಕಿಂತ ಹೆಚ್ಚು ಮತಗಳು ನನಗೆ ಬಂದಿದ್ದು ಆತ್ಮವಿಶ್ವಾಸ ಇಮ್ಮುಡಿಗೊಳಿಸಿತು. ಇಷ್ಟು ವರ್ಷಗಳ ಕಾಲ ನಾವು ಮತ ಹಾಕಿ ಗುಲಾಮರಾಗಿದ್ದೇವೆ. ಇನ್ನು ಮುಂದೆ ಗುಲಾಮಗಿರಿ ಬಿಡೋಣ. ಸ್ವಾಭಿಮಾನ ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದರು.
ಕಾಗಿನೆಲೆ ಗುರುಪೀಠದ ಪೀಠಾಧ್ಯಕ್ಷ ಶ್ರೀ ನಿರಂಜನಂದ ಪುರಿ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚದ ನೀಡಿದರು. ರಾಣೇಬೆನ್ನೂರು ತಾಲೂಕು ಕುರುಬ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಿಂತಕರು, ಸಂಶೋಧಕ ಮೇಡ್ಲೆರಿ ಗ್ರಾಮದ ಗಂಗಾಧರ್ ಕೂಡ್ಲಿ, ಶಾಸಕ ಪ್ರಕಾಶ್ ಕೋಳಿವಾಡ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ಕುರುಬ ಸಮಾಜದ ಪ್ರೌಢಶಾಲೆ ಪಿಯುಸಿ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ರಾಣೆಬೆನ್ನೂರು ತಾಲೂಕು ಸೇರಿದಂತೆ ಸುತ್ತಮುತ್ತ ಗ್ರಾಮಗಳಿಂದ ಬಂದ ಕುರುಬ ಸಮಾಜದ ಮುಖಂಡರು, ಮಕ್ಕಳ ಪೋಷಕರು, ಸಮುದಾಯದ ಬಾಂಧವರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.