SUDDIKSHANA KANNADA NEWS/ DAVANAGERE/ DATE:15-03-2024
ಬೆಂಗಳೂರು: ಮನೆಗೆ ಸಹಾಯ ಕೇಳಿಕೊಂಡು ಬಂದಿದ್ರು. ನಾನು ಸಹಾಯ ಮಾಡಿದ್ದೆ. ಪೊಲೀಸ್ ಕಮೀಷನರ್ ದಯಾನಂದ್ ಅವರಿಗೂ ಈ ಮಹಿಳೆಯ ಬಗ್ಗೆ ತಿಳಿಸಿದ್ದೆ. ಮನೆ ಮುಂದೆ ಹಲವಾರು ಬಾರಿ ಬಂದಿದ್ದರು. ನಾನು ಮಾತನಾಡಿಸಿರಲಿಲ್ಲ. ಆಮೇಲೆ ಮನೆಯೊಳಗೆ ಕರೆದು ಸಮಸ್ಯೆ ಆಲಿಸಿದ್ದೆ. ಆ ಮಹಿಳೆ ಈಗ ನನ್ನ ವಿರುದ್ಧವೇ ದೂರು ಕೊಟ್ಟಿದ್ದಾಳೆ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಸಹಾಯ ಮಾಡಿದ್ದೆ ತಪ್ಪು ಎನಿಸಿದೆ. ಮಹಿಳೆ ಹೇಳಿದ್ದ ಸಮಸ್ಯೆ ಆಲಿಸಿ, ದಯಾನಂದ್ ಅವರ ಬಳಿ ಕಳುಹಿಸಿದ್ದೆ. ಸ್ವಲ್ಪ ಧನ ಸಹಾಯವನ್ನೂ ಮಾಡಿದ್ದೆ. ಆಗಲೇ ನನ್ನ ಬಗ್ಗೆ ಮಾತನಾಡಿದ್ದಳು. ಯಾಕೋ ಸರಿ ಹೋಗುತ್ತಿಲ್ಲ ಎಂದು ಪೊಲೀಸರಿಗೆ ನಾನೇ ವಿಷಯ ತಿಳಿಸಿದ್ದೆ. ಇದು ರಾಜಕೀಯ ಪಿತೂರಿ ಎಂದು ನಾನು ಹೇಳೋದಿಲ್ಲ. ಕೇಸ್ ಆಗಿದೆ, ಎದುರಿಸೋಣ ಎಂದು ಹೇಳಿದರು.
ಮನೆಯಲ್ಲಿ ತನ್ನ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದ ಮಹಿಳೆ ಈ ರೀತಿ ಕೇಸ್ ದಾಖಲಿಸಿರುವುದು ಆಶ್ಚರ್ಯ ತಂದಿದೆ. ಯಾರಿಗೂ ಸಹಾಯ ಮಾಡಬಾರದು ಎಂದೆನಿಸುತ್ತಿದೆ ಎಂಬು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
ಇನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ನಿನ್ನೆ ರಾತ್ರಿ ಮಹಿಳೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ದೂರು ಕೊಟ್ಟಿದ್ದಾರೆ. ಪರಿಶೀಲನೆ ಮಾಡಿ ಕೇಸ್ ದಾಖಲಾಗಿದೆ. ತನಿಖೆಯನ್ನು ಪ್ರಾರಂಭ ಮಾಡ್ತಾರೆ. ಕೊಟ್ಟಿರುವ ವಿಚಾರದಲ್ಲಿ ಯಾವುದನ್ನೂ ಹೇಳಲು ಬರುವುದಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ಮಹಿಳೆಯು ಬಳಲುತ್ತಿದ್ದಾರೆ. ಟೈಪ್ ಮಾಡಿ ದೂರು ಕೊಟ್ಟಿದ್ದಾರೆ. ಬರೆದು ಕೊಟ್ಟಿಲ್ಲ. ಹಾಗಾಗಿ ದೂರು ದಾಖಲಿಸಿದ ಮೇಲೆ ತನಿಖೆ ಮಾಡುವವರೆಗೆ ಯಾವುದೇ ವಿಚಾರ ಹೇಳಲು ಆಗದು ಎಂದು ಹೇಳಿದ್ದಾರೆ.
ಮಾಜಿ ಸಿಎಂ ಅವರಿಗೆ ಸೇರಿದ ಪ್ರಕರಣ. ಅವ್ರು ಸಿಎಂ ಆಗಿದ್ದವರು. ಮಹಿಳೆ ಆರೋಪ ಮಾಡಿರುವುದು. ಯಾವುದೇ ವಿಚಾರ ಹೇಳಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು. ಹೆಚ್ಚು ಮಾಹಿತಿ ಪಡೆಯುತ್ತೇನೆ. ತನಿಖೆ ಮುಗಿಯುವವರೆಗೆ ಬಹಿರಂಗ ಮಾಡಲು ಆಗದು. ಸೂಕ್ಷ್ಮ ವಿಚಾರ. ಮಾಜಿ ಸಿಎಂಗೆ ಸಂಬಂಧಪಟ್ಟ ವಿಚಾರ. ಅದು ಇದು ಹೇಳಲು ಆಗದು. ಸಂಪೂರ್ಣ ಮಾಹಿತಿ ಪಡೆದು ತನಿಖೆ ಆರಂಭಿಸಲಾಗಿದೆ. ತನಿಖೆ ಆಧಾರದ ಮೇಲೆ ಹೇಳಬೇಕಾಗುತ್ತದೆ ಎಂದು ಹೇಳಿದರು.
ಪೊಲೀಸರು ಮಹಿಳೆಯು ದೂರು ಕೊಡುವಾಗ ಕೇಸ್ ದಾಖಲಿಸುವಾಗ ಹಿಂದೆ ಮುಂದೆ ನೋಡುತ್ತಾರೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ಕೆಲವರು ಹೇಳುತ್ತಿದ್ದಾರೆ. ಆಕೆಗೆ ರಕ್ಷಣೆ ಬೇಕಾದರೆ ಪೊಲೀಸರು ನೀಡುತ್ತಾರೆ. ದೂರು ಕೊಟ್ಟ ಮೇಲೆ ಸತ್ಯಾಸತ್ಯತೆ ತಿಳಿಯಬೇಕಾಗುತ್ತದೆ. ಅಗತ್ಯ ಬಿದ್ದರೆ ಕಾನೂನು ಪ್ರಕಾರ ಮುಂದುವಯರಿಯುತ್ತಾರೆ. ಯಾರೋ ಬರೆದುಕೊಟ್ಟ ತಕ್ಷಣ ಕ್ರಮ ಜರುಗಿಸಲು ಆಗದು. ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಲಾಗುವುದು. ಉದ್ದೇಶಪೂರ್ವಕವಾಗಿ ಮಾಡಿದ್ದಾರೋ
ಇಲ್ಲವೇ ದುರುದ್ದೇಶಪೂರ್ವಕವಾಗಿಯೇ ದೂರು ನೀಡಿದ್ದಾರೆಯೋ ಎಂಬುದನ್ನು ದೃಢಪಡಿಸಿ ಕ್ರಮ ಜರಗಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದವರು ಯಡಿಯೂರಪ್ಪ. ಇದೊಂದು ಸೂಕ್ಷ್ಮ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ನನಗಾಗಲೀ ಯಾವುದೇ ವೈಯಕ್ತಿಕ ವಿಚಾರ, ದ್ವೇಷ ಇಲ್ಲ. ಮಹಿಳೆ ದೂರು ಕೊಟ್ಟಾಗ ದೂರು ದಾಖಲಿಸಬೇಕಲ್ವಾ ಎಂದು ಹೇಳಿದರು.
ಡಿಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಸಂಬಂಧ. ಕೆಲವು ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಬೇಕಿತ್ತು. ಹಾಗಾಗಿ ಭೇಟಿ ನೀಡಿದ್ದೇನೆ. ಲೋಕಸಭಾ ಚುನಾವಣೆಗೆ 21 ಅಭ್ಯರ್ಥಿಗಳ ತೀರ್ಮಾನವನ್ನು ಮಾಡಬೇಕಿದೆ. ಚರ್ಚೆ ಮಾಡಿದ್ದೇವೆ. ನನ್ನ ಅನಿಸಿಕೆ ಪಡೆದಿದ್ದಾರೆ. ಮುಂದಿನ ನಿರ್ಧಾರ ಜರುಗಿಸುತ್ತಾರೆ ಎಂದು ತಿಳಿಸಿದರು.