SUDDIKSHANA KANNADA NEWS/ DAVANAGERE/ DATE:29-10-2024
ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬರೋಬ್ಬರಿ 10,000 ಕ್ಕೂ ಹೆಚ್ಚು ಕಳ್ಳತನ ಹಾಗೂ ಕಾಣೆಯಾದ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಭಾರತದಲ್ಲಿಯೇ ಅತಿ ದೊಡ್ಡ ಕಾರ್ಯಾಚರಣೆ.
ಇದು ಭಾರತದಲ್ಲಿ ದಾಖಲೆ ಎಂದೇ ಹೇಳಲಾಗುತ್ತಿದೆ. ಒಟ್ಟು 10,195 ಫೋನ್ಗಳು ಪತ್ತೆಯಾಗಿದ್ದು, ಅಂದಾಜು ಮೌಲ್ಯ ಸುಮಾರು 20 ಕೋಟಿ ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪೈಕಿ 3.45 ಕೋಟಿ ಮೌಲ್ಯದ 1,309 ಫೋನ್ಗಳನ್ನು ಈಗಾಗಲೇ ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಜಗದೀಶ್ ಪ್ರಕಟಿಸಿದರು.
ಎಫ್ಐಆರ್ ದಾಖಲಿಸುವ ಅಗತ್ಯವಿಲ್ಲದೇ ಕದ್ದ ಫೋನ್ಗಳನ್ನು ವರದಿ ಮಾಡಲಾಗಿದ್ದು, ವಾರಸುದಾರರಿಗೆ ಒಪ್ಪಿಸಲಾಗಿದೆ.
ವಶಪಡಿಸಿಕೊಂಡ ಫೋನ್ಗಳಲ್ಲಿ 1,156 ದೇಶಾದ್ಯಂತ 20 ವಿವಿಧ ರಾಜ್ಯಗಳಿಂದ ಬಂದಿದ್ದರೆ, 2,535 ಆಂಧ್ರಪ್ರದೇಶದ 19 ಜಿಲ್ಲೆಗಳ ನಿವಾಸಿಗಳಿಗೆ ಹಿಂತಿರುಗಿಸಲಾಗಿದೆ ಎಂದು ಎಸ್ಪಿ ಜಗದೀಶ್ ಮಾಹಿತಿ ನೀಡಿದರು.
ಇತ್ತೀಚಿಗೆ ಸ್ಥಳೀಯ ಪೊಲೀಸ್ ಮೈದಾನದಲ್ಲಿ ಸಂತ್ರಸ್ತರಿಗೆ ಫೋನ್ಗಳನ್ನು ಹಿಂದಿರುಗಿಸಿದ ಕಾರ್ಯಕ್ರಮದಲ್ಲಿ, ಎಸ್ಪಿ ಜಗದೀಶ್ ಅವರು ಮೊಬೈಲ್ ಸಾಧನಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ
ನೀಡಿದರು, ಸೂಕ್ತ ದಾಖಲೆಗಳಿಲ್ಲದ ಮೊಬೈಲ್ ಗಳನ್ನು ಅಪರಿಚಿತ ವ್ಯಕ್ತಿಗಳಿಂದ ಖರೀದಿಸಬೇಡಿ ಎಂದು ಸಲಹೆ ನೀಡಿದರು.
ತಮ್ಮ ಫೋನ್ಗಳು ಕಳೆದುಹೋದರೆ ಅಥವಾ ಕಳ್ಳತನವಾದರೆ ಚಾಟ್ಬಾಟ್ ಸೇವೆಯನ್ನು ಬಳಸಿಕೊಳ್ಳುವಂತೆ ಅವರು ಹೇಳಿದರು.