ಮುಂಬೈ/ಪುಣೆ: ಮಹಾರಾಷ್ಟ್ರದ ಲೋಹಗಢ ಕೋಟೆಯ 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ತನ್ನ ಭಾವಿ ಪತಿ, ರಿಯಾಲ್ಟರ್ ಕೇತನ್ ಅಗರ್ವಾಲ್ (25) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸಿಯಾ ಗೋಯಲ್ (20) ಕೊನೆಗೂ ಸುಳ್ಳು ಪತ್ತೆ ಪರೀಕ್ಷೆಗೆ (Polygraph Test) ಒಪ್ಪಿಗೆ ಸೂಚಿಸಿದ್ದಾಳೆ. ಈ ಹತ್ಯೆ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ, ಕೊಲೆಯ ನಿಜವಾದ ರಹಸ್ಯವನ್ನು ಹೊರತರಲು ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಪ್ರಪಾತಕ್ಕೆ ತಳ್ಳಲು ಪುಣೆಯಲ್ಲೇ ನಡೆದಿತ್ತು ತಾಲೀಮು!
ಗುರುವಾರ ಬೆಳಗ್ಗೆ ಪುಣೆ ಗ್ರಾಮಾಂತರ ಪೊಲೀಸರು ಆರೋಪಿ ಸಿಯಾ ಗೋಯಲ್ ನನ್ನು ಪುಣೆಯ ಲುಲ್ಲಾನಗರದ ಕ್ಲಬ್ ಒಂದರ ಸಮೀಪವಿರುವ ಗುಡ್ಡದ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಸೇರಿಕೊಂಡು ಕೇತನ್‌ನನ್ನು ಪ್ರಪಾತಕ್ಕೆ ಹೇಗೆ ತಳ್ಳಬೇಕು ಎಂಬುದರ ಕುರಿತು ಮೇ ತಿಂಗಳಿನಲ್ಲೇ ತಾಲೀಮು (Rehearsal) ನಡೆಸಿದ್ದ ಜಾಗವನ್ನು ಪೊಲೀಸರ ಮುಂದೆ ಗುರುತಿಸಿದ್ದಾಳೆ.
ಪರಸ್ಪರ ಆರೋಪ ಮಾಡುತ್ತಿರುವ ಪ್ರೇಮಿಗಳು:
ಜೂನ್ 18 ರಂದು ಲೋಹಗಢ ಕೋಟೆಯಲ್ಲಿ ಈ ಭೀಕರ ಕೊಲೆ ನಡೆದಿತ್ತು. ನವೆಂಬರ್‌ನಲ್ಲಿ ಕೇತನ್ ಮತ್ತು ಸಿಯಾ ಮದುವೆಯಾಗಬೇಕಿತ್ತು. ಸದ್ಯ ಇಬ್ಬರೂ ಆರೋಪಿಗಳು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆದರೆ, ವಿಚಾರಣೆ ವೇಳೆ ಇಬ್ಬರೂ ಪ್ರೇಮಿಗಳು ಕೊಲೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದು, “ನಾನು ತಳ್ಳಲಿಲ್ಲ, ಆತನೇ/ಆಕೆಯೇ ತಳ್ಳಿದ್ದು” ಎಂದು ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಿದ್ದಾರೆ. ಯಾರ ಮಾತು ನಿಜ ಎಂದು ಪತ್ತೆ ಹಚ್ಚಲು ಪೊಲೀಸರು ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರಿಗೂ ಲೈ ಡಿಟೆಕ್ಟರ್ ಟೆಸ್ಟ್ ನಡೆಸಲು ಅನುಮತಿ ಕೋರಿದ್ದಾರೆ.
ಏನಿದು ಸುಳ್ಳು ಪತ್ತೆ ಪರೀಕ್ಷೆ? ಪೊಲೀಸರ ಮುಂದಿರುವ ಸವಾಲುಗಳೇನು?
ಸುಳ್ಳು ಪತ್ತೆ ಪರೀಕ್ಷೆಯು ವ್ಯಕ್ತಿ ಉತ್ತರಿಸುವಾಗ ಆತನ ರಕ್ತದೊತ್ತಡ, ನಾಡಿಮಿಡಿತ, ಶ್ವಾಸಕೋಶದ ಚಲನೆ ಮತ್ತು ಬೆವರಿನ ಮಟ್ಟವನ್ನು ಆಧರಿಸಿ ಆತ ಸುಳ್ಳು ಹೇಳುತ್ತಿದ್ದಾನೆಯೇ ಎಂಬುದನ್ನು ಅಳೆಯುತ್ತದೆ. ಈ ಕೊಲೆಯಲ್ಲಿ ಸಿಯಾ ಗೋಯಲ್ ಮೊದಲೇ ಸ್ಕೆಚ್ ಹಾಕಿ ಪ್ರಿಯಕರನಿಗೆ ಸೈನ್ ಕೊಟ್ಟಿದ್ದಳೇ? ಕೊಲೆಗೆ ಒಂದು ದಿನ ಮುನ್ನ ಕೆಫೆಯೊಂದರಲ್ಲಿ ನಡೆದ ಪ್ಲಾನಿಂಗ್ ಏನು? ಇದಕ್ಕೂ ಮುನ್ನ ಮೂರು ಬಾರಿ ಕೊಲೆಗೆ ನಡೆಸಿ ವಿಫಲ ಯತ್ನಗಳಾಗಿದ್ದವೇ? ಹಾಗೂ ಪ್ರಿಯಕರ ಚೇತನ್ ಫೋನ್‌ನಲ್ಲಿದ್ದ ಡಿಜಿಟಲ್ ಸಾಕ್ಷ್ಯಗಳನ್ನು ಸಿಯಾ ಡಿಲೀಟ್ ಮಾಡಿದ್ದಳೇ? ಎಂಬ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ಸಜ್ಜಾಗಿದ್ದಾರೆ.
- Chetan Chaudhary
- fiance murder case Maharashtra
- Ketan Agarwal murder case
- lie detector test consent
- lohagad fort murder
- Lonavala Rural Police
- Lullanagar rehearsal
- Pune crime news
- realtor murder probe
- Siya Goyal polygraph test
- ಕೇತನ್ ಅಗರ್ವಾಲ್ ಕೊಲೆ ಪ್ರಕರಣ
- ಚೇತನ್ ಚೌಧರಿ
- ಪುಣೆ ಕ್ರೈಂ ನ್ಯೂಸ್
- ಪ್ರೇಮಿಗಳ ಹತ್ಯೆ ತಾಲೀಮು
- ಮಹಾರಾಷ್ಟ್ರ ಕ್ರೈಂ
- ಲೈ ಡಿಟೆಕ್ಟರ್ ಟೆಸ್ಟ್
- ಲೋನಾವಾಲಾ ಪೊಲೀಸ್
- ಲೋಹಗಢ ಕೋಟೆ ಕೊಲೆ
- ಸಿಯಾ ಗೋಯಲ್
- ಸುಳ್ಳು ಪತ್ತೆ ಪರೀಕ್ಷೆ





Leave a comment