ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವು ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಆತಿಥೇಯ ಸಂಸ್ಥೆಯಾಗಿ ಮಾನ್ಯತೆ ಪಡೆದಿದ್ದು, ಇದೀಗ ಐಡಿಯಾ ಹ್ಯಾಕಥಾನ್ ಆರನೇ ಆವೃತ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ದೇಶದ ಕೈಗಾರಿಕಾ ಕ್ಷೇತ್ರವನ್ನು ಮುನ್ನಡೆಸಲು ರೂಪಿಸಲಾದ ಈ ರಾಷ್ಟ್ರೀಯ ವೇದಿಕೆಯಲ್ಲಿ ಸಾರ್ವಜನಿಕರು ತಮ್ಮ ಅದ್ಭುತ ಕಲ್ಪನೆಯನ್ನು ಅನುದಾನಿತ ಯೋಜನೆಯಾಗಿ ಪರಿವರ್ತಿಸಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಾಗಿದೆ. ನವೀಕರಣೀಯ ಇಂಧನ, ರೋಬೋಟಿಕ್ಸ್, ಸ್ವಯಂಚಾಲನೆ, ವಾಹನ ತಂತ್ರಜ್ಞಾನ ಅಥವಾ ಇನ್ನಾವುದೇ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಆಲೋಚನೆಗಳನ್ನು ಹೊಂದಿರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಅಂಗೀಕೃತಗೊಳ್ಳುವ ಪ್ರತಿಯೊಂದು ಅತ್ಯುತ್ತಮ ಆಲೋಚನೆಗೆ ಗರಿಷ್ಠ 15 ಲಕ್ಷ ರೂಪಾಯಿಗಳವರೆಗೆ ಅನುದಾನದ ನೆರವು ದೊರೆಯಲಿದ್ದು, ಕೇಂದ್ರ ಸರ್ಕಾರದ ಪ್ರಮುಖ ನಾವೀನ್ಯತಾ ಯೋಜನೆಯ ಬೆಂಬಲದೊಂದಿಗೆ ರಾಷ್ಟ್ರೀಯ ಮಾನ್ಯತೆಯೂ ಸಿಗಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
18 ರಿಂದ 60 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು, ಶಿಕ್ಷಕರು, ನವೋದ್ಯಮ ಸಂಸ್ಥಾಪಕರು, ಸಂಶೋಧಕರು ಮತ್ತು ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಕರ್ನಾಟಕದ ಯಾವುದೇ ಭಾಗದ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತರು ಸಚಿವಾಲಯದ ಅಧಿಕೃತ ಜಾಲತಾಣದ ಮೂಲಕ ಜುಲೈ 14 ರೊಳಳಗಾಗಿ ತಮ್ಮ ಆಲೋಚನೆಗಳನ್ನು ಸಲ್ಲಿಸಬೇಕಾಗಿದೆ. ಜಾಲತಾಣದಲ್ಲಿ ಅರ್ಜಿ ಸಲ್ಲಿಸುವಾಗ ಆತಿಥೇಯ ಸಂಸ್ಥೆಯ ರಾಜ್ಯವಾಗಿ ಕರ್ನಾಟಕ ಮತ್ತು ಸಂಸ್ಥೆಯ ಹೆಸರನ್ನು ದಾವಣಗೆರೆ ವಿಶ್ವವಿದ್ಯಾಲಯ ಎಂದು ಆಯ್ಕೆ ಮಾಡಿಕೊಳ್ಳಬೇಕು.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಮತ್ತು ತರಬೇತಿ ನೀಡಲು ಜುಲೈ 3 ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ವಿಶ್ವವಿದ್ಯಾಲಯದ ನೂತನ ವಿಜ್ಞಾನ ವಿಭಾಗದ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ಚಂದ್ರಕಾಂತ್ ನಾಯ್ಕೋಡಿ ಅವರು ಮಾಹಿತಿ ನೀಡಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಹ್ಯಾಕಥಾನ್ ತಜ್ಞ ಡಾ. ನಾಗಸ್ವರೂಪ ಎಚ್. ಪಿ. ಅವರು ವಿಷಯ ಮಂಡನೆ ಮಾಡಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಆಸಕ್ತರು ವಿಶ್ವವಿದ್ಯಾಲಯದ ಸಂಯೋಜಕರ ಮೊ: 9740264302 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- 15 Lakh Grant
- Central Government Funding
- Chandrakant Naikodi
- DAVANAGERE UNIVERSITY
- Davanagere University Hackathon
- How to apply for MSME Hackathon
- Innovative Ideas
- MSME Idea Hackathon 2026
- MSME ಅನುದಾನ
- Nagaswarupa H P
- Startup funding Karnataka
- ಉಚಿತ ಅರ್ಜಿ
- ಐಡಿಯಾ ಹ್ಯಾಕಥಾನ್ 2026
- ತಂತ್ರಜ್ಞಾನ ಸ್ಪರ್ಧೆ
- ದಾವಣಗೆರೆ ವಿಶ್ವವಿದ್ಯಾಲಯ
- ದಾವಣಗೆರೆ ಸುದ್ದಿ
- ನವೀನ ಆಲೋಚನೆಗಳು
- ಸ್ಟಾರ್ಟ್ಅಪ್ ಫಂಡಿಂಗ್ ಕರ್ನಾಟಕ
- ₹15 ಲಕ್ಷ ಉಚಿತ ಅನುದಾನ





Leave a comment