ಪಥನಂತಿಟ್ಟ: ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ಕಳಪೆ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಮಹಿಳೆಗೆ ನ್ಯಾಯ ದೊರೆತಿದೆ. ರನ್ನಿ ಪ್ರದೇಶದಲ್ಲಿರುವ ‘ಕಿಂಗ್ಸ್ ಬಿರಿಯಾನಿ ಕೆಫೆ’ಯಿಂದ ಅಲ್‌ಫಾಮ್ (Alfaham) ಆಹಾರ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದ ರೀನಾ ಥಾಮಸ್ ಎಂಬುವವರಿಗೆ 96,500 ರೂಪಾಯಿ ಪರಿಹಾರ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕೆಫೆ ಮಾಲೀಕರಿಗೆ ಆದೇಶಿಸಿದೆ.
ಘಟನೆಯ ವಿವರ:
ರೀನಾ ಥಾಮಸ್ ಅವರು 2025ರ ಅಕ್ಟೋಬರ್ 21ರಂದು ತಮ್ಮ ಸಹೋದರಿಯೊಂದಿಗೆ ಕೆಫೆಗೆ ಭೇಟಿ ನೀಡಿ ಅಲ್‌ಫಾಮ್ ಆರ್ಡರ್ ಮಾಡಿದ್ದರು. ರುಚಿಯಲ್ಲಿ ವ್ಯತ್ಯಾಸ ಕಂಡುಬಂದ ಬಗ್ಗೆ ವೇಟರ್‌ಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದರು. ಊಟದ ಬಳಿಕ ಮನೆಗೆ ತೆರಳುವಾಗ ಮಹಿಳೆಗೆ ತೀವ್ರ ವಾಂತಿ, ಹೊಟ್ಟೆನೋವು ಮತ್ತು ತಲೆತಿರುಗುವಿಕೆ ಕಾಣಿಸಿಕೊಂಡಿದೆ.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಾಗ, ಅಪೂರ್ಣವಾಗಿ ಬೇಯಿಸಿದ ಅಥವಾ ಹಳಸಿದ ಆಹಾರದಿಂದ ‘ಸಾಲ್ಮೊನೆಲ್ಲಾ’ (Salmonella) ಸೋಂಕು ತಗುಲಿರುವುದು ವೈದ್ಯರಿಂದ ದೃಢಪಟ್ಟಿತ್ತು.
ಆಯೋಗದ ಆದೇಶ:
ಹೋಟೆಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಆಹಾರ ಸುರಕ್ಷತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಅಧ್ಯಕ್ಷ ಬೇಬಿಚನ್ ವೆಚೂಚಿರಾ ಮತ್ತು ಸದಸ್ಯ ನಿಷಾದ್ ತಂಕಪ್ಪನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. 30 ದಿನಗಳೊಳಗೆ ಈ ಕೆಳಗಿನ ಮೊತ್ತವನ್ನು ಪಾವತಿಸಲು ಸೂಚಿಸಲಾಗಿದೆ:
ಆಸ್ಪತ್ರೆ ವೆಚ್ಚ: 36,500 ರೂ.
ಪರಿಹಾರ: 50,000 ರೂ.
ದಾವೆ ವೆಚ್ಚ: 10,000 ರೂ.





Leave a comment