Home ಕ್ರೈಂ ನ್ಯೂಸ್ ಇನ್‌ಸ್ಟಾಗ್ರಾಮ್ನಲ್ಲಿ ಪ್ರೇಮದ ಬಲೆ ಬೀಸಿ ಬ್ಯಾಂಕ್ ಮ್ಯಾನೇಜರ್‌ಗೆ ₹3 ಲಕ್ಷ ಬ್ಲ್ಯಾಕ್‌ಮೇಲ್: ಹನಿಟ್ರ್ಯಾಪ್ ಜಾಲ ಭೇದಿಸಿದ ಪೊಲೀಸರಿಂದ ಮಹಿಳೆಯರು ಸೇರಿ ಐವರ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಇನ್‌ಸ್ಟಾಗ್ರಾಮ್ನಲ್ಲಿ ಪ್ರೇಮದ ಬಲೆ ಬೀಸಿ ಬ್ಯಾಂಕ್ ಮ್ಯಾನೇಜರ್‌ಗೆ ₹3 ಲಕ್ಷ ಬ್ಲ್ಯಾಕ್‌ಮೇಲ್: ಹನಿಟ್ರ್ಯಾಪ್ ಜಾಲ ಭೇದಿಸಿದ ಪೊಲೀಸರಿಂದ ಮಹಿಳೆಯರು ಸೇರಿ ಐವರ ಅರೆಸ್ಟ್!

Share
ಬ್ಯಾಂಕ್
Share

ಜೋರ್ಹಾಟ್ (ಅಸ್ಸಾಂ): ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿಯೊಬ್ಬಳನ್ನು ಭೇಟಿಯಾಗಲು ತೆರಳಿದ್ದ ಖಾಸಗಿ ಬ್ಯಾಂಕ್ ಮ್ಯಾನೇಜರ್‌ ಒಬ್ಬರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ₹3 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಅಸ್ಸಾಂನ ಜೋರ್ಹಾಟ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಸ್ಟರ್‌ಮೈಂಡ್ ಮಹಿಳೆ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ತ್ರಿಪುರ ಮೂಲದ ಹಾಗೂ ಪ್ರಸ್ತುತ ತಿನ್ಸುಕಿಯಾದಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಕಳೆದ ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಮ್‌ ಮೂಲಕ ಜೋರ್ಹಾಟ್ ಮೂಲದ ಯುವತಿಯೊಬ್ಬಳ ಪರಿಚಯವಾಗಿತ್ತು. ಇಬ್ಬರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮಾತುಕತೆ ಬೆಳೆದು ಪ್ರೇಮಾಂಕುರವಾಗಿದೆ.

ಆಗಸ್ಟ್ 14ರಂದು ಆ ಯುವತಿ ಬ್ಯಾಂಕ್ ಮ್ಯಾನೇಜರ್‌ನನ್ನು ಜೋರ್ಹಾಟ್‌ಗೆ ಆಹ್ವಾನಿಸಿದ್ದಾಳೆ. ಆಕೆಯ ಕರೆಯನ್ನು ನಂಬಿ ತಡರಾತ್ರಿ ಸುಮಾರು 1 ಗಂಟೆಗೆ ಜೋರ್ಹಾಟ್‌ಗೆ ತಲುಪಿದ ಮ್ಯಾನೇಜರ್‌ನನ್ನು ಆಕೆ ಸೋನಿ ಅಲಿ ಪ್ರದೇಶದಲ್ಲಿರುವ ಬಾಡಿಗೆ ಮನೆಯೊಂದಕ್ಕೆ ಕರೆದೊಯ್ದಿದ್ದಾಳೆ.

ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ:

ಮನೆಯ ಒಳಗಿದ್ದಾಗ ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿಗಳು ಬಾಗಿಲು ತಟ್ಟಿದ್ದಾರೆ. ಯುವತಿ ಬಾಗಿಲು ತೆರೆಯುತ್ತಿದ್ದಂತೆ ಒಳನುಗ್ಗಿದ ಆರೋಪಿಗಳು, ಬ್ಯಾಂಕ್ ಮ್ಯಾನೇಜರ್‌ನನ್ನು ವಿಡಿಯೋ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಆರೋಪಿಗಳು ₹2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಭಯಬಿದ್ದ ಮ್ಯಾನೇಜರ್ ತಕ್ಷಣವೇ ₹2 ಲಕ್ಷ ನೀಡಿದ್ದಾರೆ. ಆದರೆ ಅಲ್ಲಿಗೆ ಮುಗಿಯದ ಜಾಲ, ಮತ್ತೆ ಬೆದರಿಸಿ ಹೆಚ್ಚುವರಿಯಾಗಿ ₹1 ಲಕ್ಷ ವಸೂಲಿ ಮಾಡಿದೆ. ಒಟ್ಟು ₹3 ಲಕ್ಷ ಪಡೆದ ನಂತರವೂ ಆರೋಪಿಗಳು ಮತ್ತೊಮ್ಮೆ ₹5 ಲಕ್ಷ ನೀಡುವಂತೆ ಸತತ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ.

ಖೆಡ್ಡಾ ತೋಡಿದ ಪೊಲೀಸರು:

ಸತತ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಬ್ಯಾಂಕ್ ಮ್ಯಾನೇಜರ್ ಅಕ್ಟೋಬರ್ 2 ರಂದು ಜೋರ್ಹಾಟ್ ಸದರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಜೋರ್ಹಾಟ್ ಸದರ್ ಪೊಲೀಸ್ ಠಾಣಾಧಿಕಾರಿ ಹೃಷಿಕೇಶ್ ಹಜಾರಿಕಾ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ.

ಮೊದಲು ಗಾರ್ಮೂರ್ ಪ್ರದೇಶದ ನಿವಾಸಿಗಳಾದ ಸಂಜೀಬ್ ದಾಸ್ ಮತ್ತು ಅಂಕಿತ್ ಪಾಲ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆಯ ವೇಳೆ ಈ ಹನಿಟ್ರ್ಯಾಪ್ ಜಾಲದ ಮಾಸ್ಟರ್‌ಮೈಂಡ್ ಮೊರೊಮಿ ದಾಸ್ ನಿಯೋಗ್ ಎಂಬಾಕಿ ಎಂಬುದು ತಿಳಿದುಬಂದಿದೆ. ಡಿಬ್ರೂಗಢದಲ್ಲಿದ್ದ ಆಕೆಯನ್ನು ಕಾರ್ಯಾಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬೇಬಿ ಬೋರಾ ಹಾಗೂ ಆಕೆಯ ಪತಿ ಅಂಕಿತ್ ಬೋರಾ ಎಂಬುವವರನ್ನೂ ಬಂಧಿಸಲಾಗಿದೆ.

ಈ ಗ್ಯಾಂಗ್ ಶ್ರೀಮಂತ ವ್ಯಕ್ತಿಗಳು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಇನ್‌ಸ್ಟಾಗ್ರಾಮ್ ಮೂಲಕ ಹನಿಟ್ರ್ಯಾಪ್ ನಡೆಸಿ ಹಣ ಸುಲಿಗೆ ಮಾಡುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles