ಬೆಂಗಳೂರು: ವಿದ್ಯುತ್ ನಿಗಮಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡದ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ನೌಕರರ ಅಭಿಪ್ರಾಯದ ಮೇರೆಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟದವರು ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ತಂದ ಕಾನೂನಿಗೆ ಆಗ ಏಕೆ ವಿರೋಧಿಸಲಿಲ್ಲ?
ಖಾಸಗೀಕರಣದ ವಿರುದ್ಧ ಹೋರಾಟ ಮಾಡುತ್ತಿರುವ ನೌಕರರನ್ನು ಪ್ರಶ್ನಿಸಿದ ಅವರು, “ಈ ಕುರಿತು 2003ರಲ್ಲಿ ಕಾನೂನು ತಂದವರು ಬಿಜೆಪಿ ಸರ್ಕಾರದವರು. ಆಗ ನೀವು ಯಾರೂ ಅದರ ವಿರುದ್ಧ ಧ್ವನಿ ಎತ್ತಲಿಲ್ಲ, ಹೋರಾಟ ಮಾಡಲಿಲ್ಲ. ಈಗ ನನ್ನ ಮತ್ತು ಜಾರ್ಜ್ ಅವರ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎನ್ನುತ್ತಿದ್ದೀರಿ. ತಪ್ಪು ಮಾಡಿದವರ ವಿರುದ್ಧ ಧಿಕ್ಕಾರ ಹಾಗೂ ಒಳ್ಳೆಯ ಕೆಲಸ ಮಾಡಿದವರಿಗೆ ಜೈಕಾರ ಹೇಳಿದಾಗ ಮಾತ್ರ ಹೋರಾಟಕ್ಕೆ ಗೌರವ ಬರುತ್ತದೆ” ಎಂದರು. “ನೂರಾರು ವರ್ಷಗಳಿಂದ ವಿದ್ಯುತ್ ಲೈನ್ ಎಳೆದವರು ನೀವು, ಬೆಂಬಲ ಕೊಟ್ಟಿದ್ದು ಸರ್ಕಾರ. ಈಗ ಖಾಸಗಿ ಕಂಪನಿಯವರು ದುಡ್ಡು ಮಾಡಲು ಅಧಿಕಾರ ನೀಡಬೇಕೆ?” ಎಂದು ಖಾಸಗಿ ಕಂಪನಿಗಳ ವಿರುದ್ಧ ಕಿಡಿಕಾರಿದರು.
ನಮ್ಮ-ನಿಮ್ಮ ನಡುವೆ “ಗೀವ್ ಅಂಡ್ ಟೇಕ್” ಒಪ್ಪಂದ ಇರಲಿ:
ವೇದಿಕೆಯಲ್ಲಿ ರಾಜಕೀಯ ಸಂದೇಶ ನೀಡಿದ ಡಿಕೆಶಿ, “ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಹಿಗ್ಗುವುದಿಲ್ಲ. ನಮ್ಮದು ಏನಿದ್ದರೂ ‘ಗೀವ್ ಅಂಡ್ ಟೇಕ್’ (ಕೊಡು-ಕೊಳ್ಳುವ) ಪದ್ಧತಿ. ನೀವು ನಮಗೆ ಕಾಳಜಿ ತೋರಬೇಕು, ನಾವು ನಿಮಗೆ ಕಾಳಜಿ ತೋರಬೇಕು. 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ತಾನೆ? ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಒಂದು ವೇಳೆ ನೀವು ಮೋಸ ಮಾಡಿದರೆ ನಾನು ವಾಜಪೇಯಿ ಸರ್ಕಾರದ ತೀರ್ಮಾನದ ಕಡೆ ಮುಖ ಮಾಡಬೇಕಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.
ನಾನು ಪೆನ್ಸಿಲ್‌ನಲ್ಲಿ ಬರೆಸಿ ತಿದ್ದುವ ಕೆಲಸ ಮಾಡಿಲ್ಲ:
ಹಿಂದಿನ ಇಂಧನ ಸಚಿವರಾಗಿದ್ದ ಅವಧಿಯ ಸಾಧನೆಗಳನ್ನು ಸ್ಮರಿಸಿದ ಅವರು, “ನಾನು ಯಾವತ್ತೂ ಇಂಜಿನಿಯರ್‌ಗಳಿಂದ ಪೆನ್ಸಿಲ್‌ನಲ್ಲಿ ಬರೆಸಿ ತಿದ್ದುವ ಕೆಲಸ ಮಾಡಿಲ್ಲ. ಯಾರಿಂದಲೂ ಒಂದು ರೂಪಾಯಿ ಲಂಚ ಪಡೆಯದೆ 25 ಸಾವಿರ ಜನರನ್ನು ಇಲಾಖೆಗೆ ನೇಮಕ ಮಾಡಿದ್ದೇನೆ. 7 ವರ್ಷಕ್ಕೊಮ್ಮೆ ಆಗುತ್ತಿದ್ದ ವೇತನ ಪರಿಷ್ಕರಣೆಯನ್ನು 5 ವರ್ಷಕ್ಕೆ ಇಳಿಸಿದ್ದು ನನ್ನ ಅವಧಿಯಲ್ಲಿ” ಎಂದು ನೆನಪಿಸಿದರು. ಪಾವಗಡದ ಸೋಲಾರ್ ಪಾರ್ಕ್ ನಿರ್ಮಾಣ ಹಾಗೂ ವಿದ್ಯುತ್ ಸೋರಿಕೆಯನ್ನು ಶೇ.19 ರಿಂದ ಶೇ.10 ಕ್ಕೆ ಇಳಿಸಿದ ನಮ್ಮ ತೀರ್ಮಾನವನ್ನು ಇಡೀ ದೇಶವೇ ಅನುಸರಿಸಿತು ಎಂದರು.
ಕೊನೆಯದಾಗಿ, ಇಂಧನ ಇಲಾಖೆ ಸಿಬ್ಬಂದಿಯನ್ನು “ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು” ಎಂದು ಬಣ್ಣಿಸಿದ ಅವರು, ಇಲಾಖೆಯ ಮಂಡಳಿಯಲ್ಲಿ ನೌಕರರ ಧ್ವನಿಗೆ ಶಕ್ತಿ ಕೊಟ್ಟಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
- Cabinet Decision on Power Sector
- DK Shivakumar
- DK Shivakumar Speech
- Energy Department Karnataka
- Escoms Privatization Karnataka
- Karnataka Politics 2028
- KPTCL Privatization
- Pavagada Solar Park
- ಇಂಧನ ಇಲಾಖೆ
- ಕರ್ನಾಟಕ ರಾಜಕಾರಣ 2028
- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ
- ಕೆಜೆ ಜಾರ್ಜ್
- ಕೆಪಿಟಿಸಿಎಲ್ ನೌಕರರ ಸಂಘ
- ಡಿ. ಕೆ. ಶಿವಕುಮಾರ್
- ವಿದ್ಯುತ್ ನಿಗಮಗಳ ಖಾಸಗೀಕರಣ
- ಸಚಿವ ಸಂಪುಟ ಸಭೆ
- ಸೋಲಾರ್ ಪಾರ್ಕ್





Leave a comment